ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಏ.11 ರಂದು ಭದ್ರಾ ಮೇಲ್ದಂಡೆ ಯೋಜನೆ ಸೇರಿ ವಿವಿಧ ಯೋಜನೆಗಳ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ ಎಂದು ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಮುಖ್ಯಮಂತ್ರಿಗಳು ಜಗಳೂರು ತಾಲೂಕಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಚರ್ಚಿಸಲು ಕರೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬರದನಾಡನ್ನು ಹಸಿರ ನಾಡನ್ನಾಗಿ ಮಾಡುವ ಕಾಲ ಸನ್ನಿಹಿತವಾಗಿದ್ದು 1336 ಕೋಟಿ ರೂ ವೆಚ್ಚದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿಗೆ ಮಾನ್ಯ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಲಿದ್ದು, ಅಂದೇ ವಿವಿಧ ಇಲಾಖೆಗಳ ಸಾವಿರಾರು ಕೋಟಿ ರೂ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಸಂಘ ಸಂಸ್ಥೆಗಳು, ರಾಜಕರಣಿಗಳು ಪ್ರಗತಿ ಪರ ಹೋರಾಟಗಾರರ 40 ವರ್ಷದ ಹೋರಾಟದ ಫಲವಾಗಿ ಈ ಯೋಜನೆ ತಾಲೂಕಿಗೆ ಬಂದಿದ್ದು ಇದ್ದಕ್ಕೆ ಯಡಿಯೂರಪ್ಪವರ ಶ್ರಮ ಬಹಳಷ್ಟಿದೆ ಎಂದರು. ಈ ಯೋಜನೆ ರಾಷ್ಟ್ರೀಯ ಯೋಜನೆಯಾಗಲಿದ್ದು 60-40 ರ ಅನುಪಾತದಲ್ಲಿ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ನೀಡಲಿದೆ ಎಂದರು.
ಅಂದು ಸುಮಾರು 20 ಸಾವಿರ ಜನರ ಸಮ್ಮುಖದಲ್ಲಿ ಮಾನ್ಯ ಮುಖ್ಯಮಂತ್ರಿಗಳು ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ನೆರವಾಗುವ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಹಾಗೂ ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಿದ್ದಾರೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳ ನೂರಾರು ಕೋಟಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ದಾವಣಗೆರೆ ಜಿಲ್ಲೆಯ ಬಗೆಗೆ ವೀಶೇಷ ಕಾಳಜಿ ಹೊಂದಿರುವ ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ದಿಗೆ ಬದ್ಧ ಎಂಬ ಮಾತನ್ನು ಯಾವಾಗಲೂ ಹೇಳುತ್ತಿರುತ್ತಾರೆ. ಈ ಕಾರ್ಯಕ್ರಮವನ್ನು ಇಡೀ ಜಿಲ್ಲಾಡಳಿತವೇ ಮುಂದೆ ನಿಂತು ಅದ್ದೂರಿಯಾಗಿ ನೆರೆವೇರಿಸಿಕೊಡಲಿದೆ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಶಂಕುಸ್ಥಾಪನೆ, ಉದ್ಘಾಟನೆಗೆ ಸಿದ್ದವಿರುವ ಹಾಗೂ ಇಲಾಖೆಯಿಂದ ನೀಡಲಾಗುವ ವಿವಿಧ ಸಹಾಯಧನಗಳ ಬಗೆಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ, ಜಿ.ಪಂ ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್, ಎಸ್.ಪಿ. ರಿಷ್ಯಂತ್, ಎ.ಸಿ. ಮಮತ ಹೊಸಗೌಡರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಿ.ಬಸರಗಿ, ಡಿಎಚ್‍ಓ ನಾಗರಾಜ್, ತಹಶೀಲ್ದಾರ್ ಜಿ.ಸಂತೋಷ್ ಕುಮಾರ್,ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.