ದಾವಣಗೆರೆ: ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಗ್ರಾಮವಾಸ್ತವ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಲಿದ್ದಾರೆ. ಕಂದಾಯ ಸಚಿವರು ಈಗಾಗಲೇ ಎರಡು ಕಡೆ ಗ್ರಾಮ ವಾಸ್ತವ್ಯ ಮಾಡಿದ್ದು, ಕೋವಿಡ್ ನಂತರ ಇದೇ ಮೊದಲ ಬಾರಿಗೆ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಹಾಗೂ ಸಚಿವರನ್ನು ವಿಶೇಷ ಅಲಂಕೃತ ಚಕ್ಕಡಿಗಳಲ್ಲಿ ಸ್ಥಳೀಯ ಜಾನಪದ ಕಲಾವಿದರು ಹಾಗೂ ವಿವಿಧ ಕಲಾತಂಡಗಳೊಂದಿಗೆ ಆನೆ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ಕಂದಾಯ ಸಚಿವರು ಇಂದು (ಅ.16) ಬೆಳಿಗ್ಗೆ 10 ಗಂಟೆಗೆ ಮಲ್ಲಿಕಾರ್ಜುನ ದೇವಾಲಯದಿಂದ ವಿಶೇಷ ಅಲಂಕೃತ ಎತ್ತಿನ ಬಂಡಿಯ ಮೂಲಕ ಕಾರ್ಯಕ್ರಮಕ್ಕೆ ಆಗಮಿಸುವರು. ಮಾನ್ಯ ಮುಖ್ಯಮಂತ್ರಿಗಳು ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೊನ್ನಾಳಿ ಎಲಿಪ್ಯಾಡ್ ಬಂದು ಅಲ್ಲಿಂದ ಸುರಹೊನ್ನೆ ಗ್ರಾಮದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಪ್ರಸಕ್ತ ಸರ್ಕಾರ ರೈತರು, ಕಾರ್ಮಿಕರು, ಮಹಿಳೆಯರಿಗೆ ಹಾಕಿಕೊಂಡಿರುವ ಕಾರ್ಯಕ್ರಮಗಳು ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿವಿಧ ಇಲಾಖೆಗಳಿಂದ ಏರ್ಪಡಿಸಿರುವ ಮಾಹಿತಿ ಮಳಿಗೆಗಳನ್ನು ಉದ್ಘಾಟಿಸುವರು. ೨೭ ಗಣರಾಜ್ಯ ಘಟಕಗಳ ಆಟೋಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡುವರು ಎಂದು ಮಾಹಿತಿ ನೀಡಿದರು.
ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡುತ್ತಿದ್ದು, ಕೆಲವು ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಲಾಗುವುದು. ಹಾಗೂ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವಾರಪ್ಪ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸೇರಿದಂತೆ ಎಲ್ಲಾ ಶಾಸಕರು ಪಾಲ್ಗೊಳ್ಳುವರು. ನಂತರ ಕುಂದೂರು ಗ್ರಾಮದ ಆಂಜೀನೇಯ ದೇವಾಲಯಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಂದು ರಾತ್ರಿ ಕಂದಾಯ ಸಚಿವರು ಇಲ್ಲೆ ವಾಸ್ತವ್ಯ ಮಾಡಲಿದ್ದು, ಅನೇಕ ಸಾಂಸ್ಕೃತಿಕ, ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.17 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದು, ಅಂದು ಗಾಯಕ ಚಂದನ್ ಶೆಟ್ಟಿ ಅವರನ್ನು ಕರೆಸಲಾಗುವುದು.
ಅ.17 ರ ಬೆಳಿಗ್ಗೆ ಕಂದಾಯ ಸಚಿವರು ಹರಿಜನ ಕಾಲೋನಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಉಪಹಾರ ಸೇವಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಈ ಹಿಂದೆ ನಡೆದ ಗ್ರಾಮವಾಸ್ತವ್ಯಗಳಿಗಿಂತ ವೈವಿಧ್ಯ ಹಾಗೂ ವಿಶಿಷ್ಟವಾಗಿರಲಿದ್ದು ಕಾರ್ಯಕ್ರಮದ ಸದುಪಯೋಗವನ್ನು ಅವಳಿ ತಾಲ್ಲೂಕುಗಳ ಸಾರ್ವಜನಿಕರಿಗೆ ಸಿಗಬೇಕೆಂಬುದು ನಮ್ಮ ಸಂಕಲ್ಪವಾಗಿದೆ ಎಂದರು.



