ಚಿತ್ರದುರ್ಗ: ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ ಚುನಾವಣೆ ಚುನಾವಣೆ ಮತ ಎಣಿಕೆ ಇಂದು ನಡೆದಿದ್ದು, ಬಿಜೆಪಿ ಅಭ್ಯರ್ಥಿ ಕೆ. ಎಸ್. ನವೀನ್ ಜಯ ದಾಖಲಿಸಿದ್ದಾರೆ.
ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್ ವಿರುದ್ಧ 354 ಮತಗಳ ಅಂತರದಿಂದ ನವೀನ್ ಜಯಗಳಿಸಿದ್ಧಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಇಬ್ಬರೂ ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷದ ನಾಯಕರು ಭರ್ಜರಿ ಪ್ರಚಾರ ಕೈಗೊಂಡಿದ್ದರು.
- ಅಭ್ಯರ್ಥಿಗಳು ಪಡೆದ ಮತ
- ಬಿಜೆಪಿಯ ಕೆ. ಎಸ್. ನವೀನ್ 2,629
- ಕಾಂಗ್ರೆಸ್‌ನ ಬಿ. ಸೋಮಶೇಖರ್ 2, 271
- ಪಕ್ಷೇತರ ಅಭ್ಯರ್ಥಿ 16 ಮತಗಳು.
- ತಿರಸ್ಕತ ಮತಗಳು 144
ಕಳೆದ ಎರಡು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಕೆ. ಎಸ್. ನವೀನ್ ಮೂರನೇ ಬಾರಿಗೆ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಸ್ಥಾನ ಕಳೆದುಕೊಂಡಿದೆ. ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕು ಸೇರಿವೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ಒಳಗೊಂಡಿದೆ.
ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆ ಕಚೇರಿಗಳಲ್ಲಿ ಮತದಾರರಾದ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಶಾಸಕರು ಹಾಗೂ ಸಂಸದರು ಮತ ಚಲಾಯಿಸಿದ್ದರು.



