ಬೆಂಗಳೂರು; ಟೆಂಡರ್ ನೀಡಲು 40 ಲಂಚ ಪಡೆದ ಪ್ರಕರಣದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಅಧ್ಯಕ್ಷ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್‌ಗೆ ಜಾಮೀನು ಮಂಜೂರಾಗಿದೆ. 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತ್ರಿ, ಪೂರ್ವಾನಮತಿ ಇಲ್ಲದ ಎಲ್ಲಿಗೂ ತೆರಳಬಾರದು ಹಾಗೂ ಪಾರ್ಸ್‌ಪೋರ್ಟ್ ತನಿಖಾಧಿಕಾರಿಗೆ ನೀಡುವಂತೆ ಆದೇಶಿಸಿ ಜಾಮೀನು ನೀಡಲಾಗಿದೆ.
ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಲೋಕಾಯುಕ್ತ ಪೊಲೀಸರು 40 ಲಕ್ಷ ರೂ.ಲಂಚ ಪಡೆಯುವಾಗ ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಎಂ. ವಿ. ಪ್ರಶಾಂತ್ ಕುಮಾರ್ ಮಾಡಾಳ್‌ರನ್ನು ಮಾರ್ಚ್ ತಿಂಗಳಿನಲ್ಲಿ ಬಂಧಿಸಿದ್ದರು.
ಲಂಚ ಪ್ರಕರಣದಲ್ಲಿ ಜಾಮೀನು ಕೋರಿ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿಯೂ ಆಗಿರುವ ಎಂ. ವಿ. ಪ್ರಶಾಂತ್ ಕುಮಾರ್ ಮಾಡಾಳ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನುಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಪ್ರಕರಣದ ಸಾಕ್ಷ್ಯಾಧಾರ ನಾಶಪಡಿಸಲು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ನ್ಯಾಯಾಲಯ ಷರತ್ತು ಹಾಕಿದೆ. ಹೈಕೋರ್ಟ್ ಜಾಮೀನು ನೀಡಿದ್ದರಿಂದ ಸುಮಾರು 1 ತಿಂಗಳ ಕಾಲದ ಜೈಲುವಾಸ ಮುಗಿಸಿ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಬಿಡುಗಡೆಯಾಗಲಿದ್ದಾರೆ.
ಲಂಚದ ಹಣದ ಭಾಗವಾಗಿ 40 ಲಕ್ಷ ಸ್ವೀಕರಿಸುವಾಗಲೇ ಪ್ರಶಾಂತ್ ಮಾಡಾಳ್‌ರನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಖಾಸಗಿ ಕಚೇರಿಯಲ್ಲಿ ಬಂಧಿಸಲಾಗಿತ್ತು. ಬಳಿಕ ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ದಾಳಿ ಮಾಡಿದಾಗ 6 ಕೋಟಿ ರೂ. ದಾಖಲೆ ಇಲ್ಲದ ಹಣ ಪತ್ತೆಯಾಗಿತ್ತು.ಈ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಅವರ ಪುತ್ರ ಪ್ರಶಾಂತ್ ಎರಡನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರಾಗಿತ್ತು.



