ದಾವಣಗೆರೆ: ಕೋಟಿ ಕಂಠ ಗಾಯನ ಕಾರ್ಯಕ್ರಮ ಜನೋತ್ಸವವಾಗಲು ಸಾರ್ವಜನಿಕರು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡಪರ ಚಿಂತಕ ,ಚನ್ನಗಿರಿ ಕಸಾಪ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ಕೋರಿದ್ದಾರೆ.
67 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವೈವಿಧ್ಯಮಯ ಕಲೆ, ಸಾಹಿತ್ಯ,ಸಂಗೀತ ಮತ್ತು ಸಂಸ್ಕೃತಿಯ ನೆಲೆವೀಡಾದ ಕರ್ನಾಟಕದ ಹಿರಿಮೆ ಗರಿಮೆಯನ್ನು ದಿಗಂತಕ್ಕೇರಿಸಲು ಹಾಗೂ ಅಭಿಜಾತ ಸ್ಥಾನಮಾನದ ಭವ್ಯ ಶ್ರೇಷ್ಠತೆಯನ್ನು ಹೊಂದಿರುವ ಕನ್ನಡ ಭಾಷೆಯ ಅಭಿಮಾನದ ಪ್ರತೀಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚನ್ನಗಿರಿ ತಾಲ್ಲೂಕು ಆಡಳಿತದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಕ್ಟೋಬರ್ 28 ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಚನ್ನಗಿರಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ‘ನನ್ನ ನಾಡು ನನ್ನ ಹಾಡು’ ಶೀರ್ಷಿಕೆಯ ಅಡಿಯಲ್ಲಿ ಕನ್ನಡಾಭಿಮಾನವನ್ನು ಬಿಂಬಿಸುವ ಆಯ್ದ ಆರು ಹಾಡುಗಳಾದ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಗಾಯನಗಳನ್ನು ಹಾಡಬಹುದು.



