ದಾವಣಗೆರೆ: ಬೆಳ್ಳಂಬೆಳಗ್ಗೆ ನಡೆದ ಕಾರು- ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಈಗ ಹಿಂಬದಿ ಸವಾರನನ್ನು ಸಹ ಬದುಕಿಸಲು ಸಾಧ್ಯವಾಗಿಲ್ಲ. ಈ ಮೂಲಕ ಬೈಕ್ ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲ್ಕೂಕಿನ ಕಾಕನೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಶನಿವಾರ (ಮಾ.09) ಮುಂಜಾನೆ 7.30ಕ್ಕೆ ಘಟನೆ ನಡೆದಿತ್ತು. ಈ ಅಪಘಾತದಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆಗೆ ಹಂಪ್ಸ್ ನಿರ್ಮಿಸುವಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರ ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ.ದಾವಣಗೆರೆ ತಾಲ್ಲೂಕಿನ ದ್ಯಾಮೇನಹಳ್ಳಿ ಸಂತೋಷ (26) ಹಾಗೂ ಹರಿಹರ ತಾಲ್ಲೂಕಿನ ಗುಲಿಗೇನಹಳ್ಳಿ ಮಹೇಂದ್ರ (23) ಮೃತರು.ಯುವಕರು ಚನ್ನಗಿರಿ ಕಡೆಗೆ ಹೋಗುತ್ತಿದ್ದರು. ಇದೇ ಮಾರ್ಗದಲ್ಲಿ ಚಿಕ್ಕಮಗಳೂರಿನಿಂದ ದಾವಣಗೆರೆ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ರಸ್ತೆ ಬದಿ ಗುಂಡಿಗೆ ಬಿದ್ದಿದ್ದಾರೆ. ಕಾರಿನಲ್ಲಿದ್ದ ಮಹಿಳೆಯರು ರಕ್ಷಿಸಿದ್ದಾರೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಾಜ್ಯ ಹೆದ್ದಾರಿಯಲ್ಲಿ ಹಂಪ್ಸ್ ಹಾಕದಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ರಾಜ್ಯ ಹೆದ್ದಾರಿಯಲ್ಲಿ 15 ದಿನಗಳಿಗೊಮ್ಮೆ ಅಪಘಾತಗಳು ನಡೆಯುತ್ತಿವೆ. ರಸ್ತೆ ಹಂಪ್ಸ್‌ಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಲೋಕೋಪಯೋಗಿ ಇಲಾಖೆ, ಕೆಆರ್‌ಡಿಸಿಎಲ್ ಇಲಾಖೆ ಕಚೇರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಹಂಪ್ಸ್ ನಿರ್ಮಾಣ ಮಾಡಿಲ್ಲ ಎಂದು ಗ್ರಾಮಸ್ಥರು ರಸ್ತೆಗೆ ಬ್ಯಾರಿಕೇಡ್ ಹಾಕಿ ಘೋಷಣೆ ಕೂಗಿದರು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಕುಮಾರ್ ಸಂತೋಷ್, ಡಿವೈಎಸ್ಪಿ ಪ್ರಶಾಂತ ಮನ್ನೋಳಿ, ಸಿಪಿಐ ಗೋಪಾಲ್ ನಾಯ್ಕ, ಎಸ್‌ಐ ದೀಪು ಎಂ.ಟಿ, ಚನ್ನವೀರಪ್ಪ ಭೇಟಿ ನೀಡಿ ಪರಿಶೀಲಿಸಿದರು.



