ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಎಲ್ಲ ಸಮುದಾಯದ ಮಠಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡುತ್ತಿದ್ದಾರೆ. ಎರಡು ದಿನ ತುಮಕೂರು, ದಾವಣಗೆರೆ, ಚಿತ್ರದುರ್ಗ ಪ್ರವಾಸದಲ್ಲಿದ್ದು, ವಿವಿಧ ಸಭೆ-ಸಮಾರಂಭಗಳಲ್ಲಿ ಭಾಗಿಯಾಗಿ ರಾಜ್ಯದ ಪ್ರಮುಖ ಮಠಗಳಿಗೆ ಭೇಟಿ ನೀಡುವ ಯಾತ್ರೆ ಇಂದು (ಜ.6) ಕೂಡ ಮುಂದುವರಿದಿದೆ. ಈ ಮೂಲಕ ಎಲ್ಲ ಸಮುದಾಯ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಸಮೀಪದ ಕನಕ ಗುರುಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿ ಶ್ರೀ ನಿರಂಜನಾನಂದ ಸ್ವಾಮೀಜಿ ಆಶೀರ್ವಾದ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾದರು. ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ರೀ ನಿರಂಜನಾನಂದ ಸ್ವಾಮೀಜಿ ಅವರ ಜತೆ ಮಾತುಕತೆ ನಡೆಸಿದರು. ನಿಮ್ಮ ಸಮುದಾಯದ ಜತೆ ಬಿಜೆಪಿ ಸರ್ಕಾರ ನಿಲ್ಲಲಿದೆ. ಈ ವೇಳೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು.
ಇನ್ನೂ ನಡ್ಡಾ ಅವರು ಮೊದಲು ಹರಿಹರ ತಾಲೂಕಿನ ರಾಜನಹಳ್ಳಿವಾಲ್ಮೀಕಿ ಪೀಠಕ್ಕೆ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಅವರು ಬಂದಿಲ್ಲ. ಹೀಗಾಗಿ ಬರಲು ವಿಳಂಬ ಮಾಡಿದ್ದಕ್ಕೆ ವಾಲ್ಮೀಕಿ ಶ್ರೀಗಳು ಬೇಸರಗೊಂಡು, ಕಾಯದೇ ಶ್ರೀಮಠದಿಂದ ಹೊರಟು ಹೋದರು. ಈ ಸಂದರ್ಭದಲ್ಲಿ ಮಠದಲ್ಲಿಯೇ ಇದ್ದ ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ, ಸ್ವಲ್ಪ ಸಮಯದಲ್ಲಿ ಬರುತ್ತಾರೆ ಎಂದು ಹೇಳಿದರೂ, ಮಾತು ಕೇಳದ ವಾಲ್ಮೀಕಿ ಶ್ರೀಗಳು ಮಠದಿಂದ ಹೊರನಡೆದಿದ್ದಾರೆ. ಸ್ವಾಮೀಜಿ ಇಲ್ಲದೇ ಇರುವ ವಿಚಾರ ತಿಳಿದಿದ್ದರಿಂದ ನಡ್ಡಾ ಮಠಕ್ಕೆ ಬರಲು ಹಿಂದೇಟು ಹಾಕಿ, ಪಂಚಮಸಾಲಿ ಮಠದ ಕಡೆ ಪ್ರಯಾಣ ಬೆಳೆಸಿದರು.
ನಂತರ ಮತ್ತೆ ಜೆ.ಪಿ.ನಡ್ಡಾ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ, ಲಿಂಗೈಕ್ಯ ಪುಣ್ಯಾನಂದಪುರಿ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಬಳಿಕ ಅಲ್ಲಿಂದ ತೆರಳಿದರು. ಪ್ರಸನ್ನಾನಂದಪುರಿ ಸ್ವಾಮೀಜಿ ಮಠದಿಂದ ಹೊರ ಹೋಗಿದ್ದರಿಂದ ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರಪ್ಪ ಬೇಸರಗೊಂಡಿದ್ದರು. ಹರಿಹರ ಹೊರವಲಯದಲ್ಲಿರುವ ಪಂಚಮಸಾಲಿ ಪೀಠಕ್ಕೆ ಜೆ.ಪಿ.ನಡ್ಡಾ ಭೇಟಿ ನೀಡಿ, ವಚನಾನಂದ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.