ದಾವಣಗೆರೆ: ಸಂಸದ ಜಿ. ಎಂ. ಸಿದ್ದೇಶ್ವರ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ವಿರೋಧಿ ನಡವಳಿಕೆ ಸಹಿಸುವ ಪ್ರಶ್ನೆಯೇ ಇಲ್ಲ. ಸಂಸದರ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ರೇಣುಕಾಚಾರ್ಯರಿಗೆ ಯಡಿಯೂರಪ್ಪರು ಫೋನ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ. ರೇಣುಕಾಚಾರ್ಯ ಅವರ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ದ್ವಂದ್ವ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇತ್ತೀಚೆಗೆ ರೇಣುಕಾಚಾರ್ಯ, ಮುಂಬರುವ ಲೋಕಸಭೆ ಚುನಾವಣೆಗೆ ಹೊರಗಿನವರಿಗೆ ಟಿಕೆಟ್ ಬೇಡ, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಹೇಳಿಕೆ ನೀಡಿದ್ದರು. ಇದರ ಹಿಂದೆ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಇದೇ ರೀತಿ ಟೀಕೆ ಮಾಡಿದ್ರೆ ಕ್ರಮ ಖಚಿತ ಎಂದರು.
40 ಮಂದಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೇಶ್ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ದಾವಣಗೆರೆ ಜಿಲ್ಲೆಯ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಕಟ್ಟಿದ್ದು ದಿ. ಮಲ್ಲಿಕಾರ್ಜುನಪ್ಪ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರರು. ಅವರ ಬಗ್ಗೆ ಮಾತನಾಡುವ ನೈತಿಕತೆ ರೇಣುಕಾಚಾರ್ಯರಿಗಿಲ್ಲ. ಸಿದ್ದೇಶ್ವರ ಅವರ ವಿದ್ಯಾಸಂಸ್ಥೆಗಳು, ಕಾಲೇಜು, ವ್ಯವಹಾರ ದಾವಣಗೆರೆಯೇ ಆಗಿದೆ. ಇನ್ನೊಮ್ಮೆ ಹೇಳಿಕೆ ಕೊಟ್ಟರೆ ರಾಜ್ಯ ನಾಯಕರು ಶಿಸ್ತಿನ ಕ್ರಮ ಜರುಗಿಸುವುದು ಖಚಿತ.ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಯಡಿಯೂರಪ್ಪರೇ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಮಾಧ್ಯಮ್ ಪ್ರಮುಖ್ ಹೆಚ್. ಪಿ. ವಿಶ್ವಾಸ್, ಗಂಗಾಧರ್ ಮತ್ತಿತರಿದ್ದರು.



