ದಾವಣಗೆರೆ: ಮಾಜಿ ಸಿಎಂ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆಯನ್ನು ಫೆ.27ರಂದು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಯೋಜಿಸಲು ವಿಜಯೇಂದ್ರ ಬಣ ನಿರ್ಣಯ ಕೈಗೊಂಡಿತು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳಸಿದ ಯಡಿಯೂರಪ್ಪ ಅವರ ಜನ್ಮದಿನದಂದು 20 ಲಕ್ಷ ಜನರನ್ನು ಸೇರಿಸಿ ಅದ್ದೂರಿ ಹುಟ್ಟು ಹಬ್ಬ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಡಿಯೂರಪ್ಪ ಅವರ ಅಭಿಮಾನಿಗಳಾದ 55 ಮಾಜಿ ಶಾಸಕರು ಹಾಗೂ ಸಚಿವರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ರಾಜನಾಥ್ ಸಿಂಗ್ ಸೇರಿ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗುವುದು. ಈ ಬಗ್ಗೆ ಪಕ್ಷದ ಹೈಕಮಾಂಡ್ ಒಪ್ಪಿಗ ಪಡೆಯಲು ದೆಹಲಿಗೆ ನಿಯೋಗ ತೆರಳಲಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಡಿ.9 ಮತ್ತು 10ರಂದು ಸಭೆ ನಿಗದಿಯಾಗಿತ್ತು. ಎಸ್.ಎಂ.ಕೃಷ್ಣ ಅವರ ನಿಧನದಿಂದಾಗಿ ಸಭೆ ಮುಂದೂಡಲಾಗಿತ್ತು. ರಾಜಕೀಯ ಸಭೆ ಕರೆಯುವ ಅಧಿಕಾರ ಇರುವುದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಮಾತ್ರ. ಯಡಿಯೂರಪ್ಪ ಅವರ ಅಭಿಮಾನಿಯಾಟಗಿ ಸಭೆ ಸೇರಿ ಜನ್ಮದಿನಾಚರಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಿದ್ದೇವೆ ಎಂದರು.
ಸಭೆಯಲ್ಲಿ ಎಸ್.ವಿ. ರಾಮಚಂದ್ರಪ್ಪ , ಸಂಪಗಿ, ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ, ರಾಣಿಬೆನ್ನೂರು ಅರುಣಕುಮಾರ್ ಪೂಜಾರ, ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ಗುಡ್ಡ, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್, ಮಾಡಾಳು ಮಲ್ಲಿಕಾರ್ಜುನ್ , ಲೋಕಿಕೆರೆ ನಾಗರಾಜ್ , ಅಜಯ್ ಕುಮಾರ್ ಸೇರಿ 40 ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು.



