ದಾವಣಗೆರೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಈಡೇರಿಸಿಲ್ಲ. ಜುಲೈ ತಿಂಗಳಿನಲ್ಲಿ ಅಧಿವೇಶನ ಪ್ರಾರಂಭವಾಗಲಿದ್ದು, ಜು.5ರಿಂದ ಸದನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲಾಗುವುದು. ಗ್ಯಾರಂಟಿ ಈಡೇರಿಸಲು ಆಗದಿದ್ರೆ ಅಧಿಕಾರ ಬಿಟ್ಟು ತೊಲಗಿ ಎಂದು ಮಾಜಿ ಸಿಎಂ ಯುಡಿಯೂರಪ್ಪ ಕಿಡಿಕಾರಿದರು.
ನಗರದ ರೇಣುಕಾ ಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯ ಉದ್ಘಾಟಿಸಿ ಮಾತನಾಡಿದ ಅವರು, 4ರಂದು ರಾಜ್ಯಪಾಲರ ಭಾಷಣ ಇರುತ್ತದೆ. ಷರತ್ತು ವಿಧಿಸದೇ ಗ್ಯಾರಂಟಿ ಜಾರಿಗೊಳಿಸದಿದ್ದರೆ ಪ್ರತಿಭಟನೆಯನ್ನು ಜುಲೈ 5ರಿಂದಲೇ ನಡೆಸುತ್ತೇನೆ. ಅಧಿವೇಶನ ನಡೆಯುವರೆಗೆ ನಡೆಯಲಿದೆ. ಶಾಸಕರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೆಲ ಷರತ್ತು ವಿಧಿಸಿ ಶಕ್ತಿ ಯೋಜನೆ ಜಾರಿ ಬಿಟ್ಟರೆ ಉಳಿದ ನಾಲ್ಕು ಭರವಸೆಗಳ ಈಡೇರಿಸುವ ಲಕ್ಷಣ ಕಾಣುತ್ತಿಲ್ಲ. ಜುಲೈ 4ರೊಳಗೆ ನಾಲ್ಕು ಗ್ಯಾರಂಟಿ ಅನುಷ್ಠಾನಗೊಳಿಸದಿದ್ದರೆ ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ. ಸದನದ ಒಳಗೆ ಶಾಸಕರು, ಹೊರಗೆ ನಾವು ಹೋರಾಟ, ಸತ್ಯಾಗ್ರಹ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷವು ಮನೆ ಮನೆಗೆ ಹೋಗಿ 5 ಗ್ಯಾರಂಟಿಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಸಹಿ ಮಾಡಿ ಹಂಚಿದ್ದರು. ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರುವ ಲಕ್ಷಣ ಕಾಣುತ್ತಿಲ್ಲ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆ ಅನುಭವಿಸಿದ್ದಕ್ಕೆ ಕಾರ್ಯಕರ್ತರು ಚಿಂತೆಗೆ ಒಳಗಾಗುವುದು ಬೇಡ. ಬಿಜೆಪಿ ಕಾರ್ಯಕರ್ತರು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯತೆಗಳನ್ನು ಜನರಿಗೆ ತಿಳಿಸುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ. ಗ್ಯಾರಂಟಿ ಈಡೇರಿಸದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಕರೆ ನೀಡಿದರು.
ಪ್ರತಿ ಒಬ್ಬ ವ್ಯಕ್ತಿಗೆ ರಾಜ್ಯ ಸರ್ಕಾರ 15 ಕೆಜಿ ಅಕ್ಕಿ ನೀಡಲೇಬೇಕು. ಕೇಂದ್ರ ಸರ್ಕಾರವು ಐದು ಕೆಜಿ ಅಕ್ಕಿ ನೀಡುತ್ತದೆ. ಹಾಗಾಗಿ, ಸಿದ್ದರಾಮಯ್ಯರು ಚುನಾವಣೆಗೆ ಮುನ್ನ ಘೋಷಣೆ ಮಾಡಿದ ಪ್ರಕಾರ ಹತ್ತು ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು.ಜನರಿಗೆ ಕೊಟ್ಟ ಭರವಸೆ ಈಡೇರಿಸದೇ ದ್ರೋಹ ಮಾಡಿದರೆ ಸಹಿಸಿಕೊಂಡು ಕೂರಲು ಸಾಧ್ಯವೇ ಇಲ್ಲ. ಫಸಲ್ ಭೀಮಾ ವಿಮಾ ಹಣ ಪಾವತಿ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನವರು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.