ದಾವಣಗೆರೆ: ಭದ್ರಾ ಡ್ಯಾಂನಿಂದ ನಾಲೆಗೆ ನೀರು ಸ್ಥಗಿತಗೊಳಿಸಲಾಗಿದೆ. ಇದರಿಂದ ಭತ್ತ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರು ಸ್ಥಗಿತ ವಿರೋಧಿಸಿ ಕಳೆದ ಒಂದು ವಾರದಿಂದ ಭಾರತೀಯ ರೈತ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸು ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ. ಹೀಗಾಗಿ ನಾಳೆ ಒಂದು ದಿನ ಕಾದು ನೋಡಿ ಸೋಮವಾರ (ಸೆ.25) ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ ಎಂದು ರೈತ ಒಕ್ಕೂಟದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈತ ಮುಖಂಡರಾದ ಬೆಳವನಹಳ್ಳಿ ನಾಗೇಶ್ವರ ರಾವ್, ಕೊಳೇನಹಳ್ಳಿ ಸತೀಶ್, ಶಾಮನೂರು ಲಿಂಗರಾಜ್, ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ ಅವರು ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಹೀಗಾಗಿ ನಾಳೆ ಸಂಜೆ ಒಳಗೆ ಅಧಿಕೃತ ಲಿಖಿತ ಆದೇಶವನ್ನು ಹೊರಡಿಸಬೇಕು. ಒಂದು ವೇಳೆ ಲಿಖಿತ ಆದೇಶ ಹೊರಡಿಸದಿದ್ರೆ ಸೋಮವಾರ (ಸೆ.25) ದಾವಣಗೆರೆ ಬಂದ್ ನೀಡಲಾಗುವುದು ಎಂದರು.
ನೀರಾವರಿ ಇಲಾಖೇ ಅಧಿಕಾರುಗಳು, ಜಿಲ್ಲಾ ಉಸ್ತುವಾರಿ ಸಚಿವ ಕೂಡಲೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ನೀರು ಹರಿಸುವ ಆದೇಶ ಹೊರಡಿಸಬೇಕು. ಈ ಕೆಲಸ ತಕ್ಷಣಕ್ಕೆ ಮಾಡದಿದ್ದಲ್ಲಿ ಸೋಮವಾರ ದಾವಣಗೆರೆ ಜಿಲ್ಲೆ ಬಂದ್ ಎದುರಿಸಲು ಸಿದ್ಧರಾಗಿ. ಎಲ್ಲಾ ಕನ್ನಡ ಪರ ಹೋರಾಟಗಾರರು, ಆಟೋ ಡ್ರೈವರ್, ಅಂಗಡಿ ಮಾಲೀಕರು ಸಂಘಟನೆಗಳು, ವರ್ತಕರು, ಕಾರ್ಮಿಕರ ಸಹಕಾರದೊಂದಿಗೆ ಬಂದ್ ನಡೆಸಲಾಗುವುದು. ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜನರ ಹಿತ ಕಾಯಲು ಮುಂದಾಗಿದ್ದಾರೆ. ಅದೇ ರೀತಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿನ ಜನ ಹಿತ ಕಾಯಲು ಮುಂದಾಗಬೇಕು ಎಂದರು.
ಈ ಮೊದಲು ಸಭೆಯಲ್ಲಿ ನಿರ್ಧರಿಸಿದಂತೆ 100 ದಿನ ನೀರು ಪೂರೈಸಬೇಕು. ಕೊಟ್ಟ ಮಾತಿನಂತೆ ಅಧಿಕಾರಿಗಳು ಮತ್ತು ಸರ್ಕಾರ ನಡೆದುಕೊಳ್ಳಬೇಕು. ನೀರಿನ ಕೊರತೆ ನೆಪ ಹೇಳಿ ಆನ್ ಅಂಡ್ ಆಫ್ ಪದ್ಧತಿ ಜಾರಿಗೆ ತಂದಿದ್ದಾರೆ. ಇದರಿಂದ ಕೊನೆ ಭಾಗದ ರೈತರ ಭತ್ತ ಒಣಗುತ್ತಿದೆ. ಈಗಾಗಲೇ 40 ದಿನ ಪೂರೈಸಿ ಉಳಿದ 60 ದಿನ ನೀರಿಲ್ಲ ಎಂದರೆ ಹೇಗೆ…? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹೆಚ್. ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ, ಕಕ್ಕರಗೊಳ್ಳದ ಕಲ್ಲಿಂಗಪ್ಪ, ಬಸಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ್, ಎ. ಪ್ರಕಾಶ್, ಹನುಮಂತಪ್ಪ, ಕುಂದುವಾಡದ ಪುನೀತ್, ಹರಪನಹಳ್ಳಿ ಉಜ್ಜಣ್ಣ, ಅನೇಕಲ್ಲು ಮಂಜುನಾಥ್, ಕುಂದುವಾಡದ ಚಂದ್ರಪ್ಪ, ಕುಂದುವಾಡದ ಅಣ್ಣಪ್ಪ ಸೇರಿದಂತೆ ಮತ್ತಿತರರು ಇದ್ದರು.
ದಾವಣಗೆರೆ: ಹೊಸ ರಾಶಿ ಅಡಿಕೆ ದಿಢೀರ್ 3 ಸಾವಿರ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿ ಸ್ವಲ್ಪ ಚೇತರಿಕೆ..!



