ದಾವಣಗೆರೆ: ಭದ್ರಾ ಬಲದಂಡೆ ನಾಲೆಯಿಂದ ಕಾಲುವೆಗಳಿಗೆ ಫೆಬ್ರವರಿ 16 ರಿಂದ 28 ರ ವರೆಗೆ ನೀರು ಹರಿಸಿದ ವೇಳೆ ಕಾಲುವೆಯಲ್ಲಿ ಅನಧಿಕೃತ ಪಂಪ್‍ಸೆಟ್ ಅಳವಡಿಸಿದ ಕಾರಣ ಕೊನೆ ಭಾಗದ ರೈತರಿಗೆ ನೀರು ತಲುಪಲು ಸಾಧ್ಯವಾಗಿಲ್ಲ, ಆದರೂ ಸಹ ಅಧಿಕಾರಿಗಳು ತೆರವು ಕಾರ್ಯಾಚರಣೆ ಮಾಡಿ ನೀರು ತಲುಪಿಸಲು ಕ್ರಮ ಕೈಗೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಕಾಲುವೆಗೆ ನೀರು ಹರಿಸುವ ವೇಳೆ ಎಲ್ಲಾ ಅನಧಿಕೃತ ಪಂಪ್‍ಸೆಟ್‍ಗಳ ತೆರವು ಮಾಡಿ ಕೊನೆ ಭಾಗದ ರೈತರಿಗೆ ನೀರು ಕೊಡಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ ಸಚಿವರು ಅನಧಿಕೃತ ಪಂಪ್‍ಸೆಟ್ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಯಾವುದೇ ಮುಲಾಜಿಗೆ ಮಣಿಯದೇ ನೀರಿನ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಕೊನೆ ಭಾಗದ ರೈತರಿಗೆ ನೀರು ತಲುಪಿಸಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ತಾ; ದೊಡ್ಡಬಾತಿ ಗ್ರಾಮದಲ್ಲಿ ಜಿಲ್ಲಾ ಅಡಳಿತ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ದೊಡ್ಡಬಾತಿ ಹಾಗೂ ಹಳೆಬಾತಿ ಗ್ರಾಮ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಅಹವಾಲು ಸ್ವೀಕಾರ, ವಿವಿಧ ಸರ್ಕಾರಿ ಸೌಲಭ್ಯಗಳ ವಿತರಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರ ಸಮಸ್ಯೆಗಳು, ಕುಂದುಕೊರತೆಗಳನ್ನು ಇತ್ಯಾರ್ಥ ಮಾಡುವ ಉದ್ದೇಶದಿಂದ ಅಧಿಕಾರಿಗಳ ತಂಡವೇ ಜನರ ಮನೆ ಬಾಗಿಲಿಗೆ ಬಂದು ಅರ್ಜಿ ಪಡೆದು ಸರ್ಕಾರದ ಸೌಲಭ್ಯ ಕಲ್ಪಿಸುವ ಮೂಲಕ ಜನರ ಕುಂದುಕೊರತೆಗಳಿಗೆ ಸ್ಪಂದಿಸಲಾಗುತ್ತಿದೆ. ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು ಇದು ಎಲ್ಲಾ ಕುಟುಂಬಕ್ಕೂ ಸಿಕ್ಕಿದೆ. ಆದರೆ ಯಾವುದೇ ಕುಟುಂಬ, ಫಲಾನುಭವಿಗಳಿಗೆ ಈ ಯೋಜನೆಗಳನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ ಅವರಿಗೆ ತಕ್ಷಣವೇ ಮುಟ್ಟಿಸುವ ಕೆಲಸ ಮಾಲಾಗುತ್ತದೆ ಎಂದರು.



