ದಾವಣಗೆರೆ: ಭದ್ರಾ ಜಲಾಶಯ ಪ್ರದೇಶವಾದ ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನದಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಭದ್ರಾ ಜಲಾಶಯದ ಒಳ ಹರಿವು 2 ಸಾವಿರದಿಂದ 8 ಸಾವಿರ ಕ್ಯೂಸೆಕ್ ವರೆಗೆ ದಿಢೀರ್ ಆಗಿ ಏರಿಕೆಯಾಗಿದೆ. ಈ ಮಳೆ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ತುಸು ನೆಮ್ಮದಿ ತಂದಿದೆ.
ಕಳೆದ ವರ್ಷದ ತೀವ್ರ ಬರಗಾಲದಿಂದ 68 ವರ್ಷದಲ್ಲಿಯೇ ಅತಿ ಕಡಿಮೆ ನೀರು ಸಂಗ್ರಹವಾಗಿದ್ದ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತದರೂ, ನಂತರದ 15 ದಿನ ಸಂಪೂರ್ಣ ತಗ್ಗಿತ್ತು. ಇದರಿಂದ ರೈತರು ಕಳೆದ ವರ್ಷದ ಸ್ಥಿತಿಯೇ ಈ ವರ್ಷವೂ ಬರಲಿಯೇ ಎನ್ನುವ ಆತಂಕ ಮೂಡಿತ್ತು. ಈಗ ಡ್ಯಾಂ ಪ್ರದೇಶದಲ್ಲಿ ಮತ್ತೆ ಜೋರು ಮಳೆಯಾಗುತ್ತಿದ್ದು, ರೈತರಿಗೆ ಹೊಸ ಭರವಸೆ ಹುಟ್ಟಿಸಿದೆ.
ಭದ್ರಾವತಿಯ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜೂ.28) ನೀರಿನ ಮಟ್ಟ 122.3 ಅಡಿಯಷ್ಟಿದೆ. ಒಳ ಹರಿವು 8,655 ಕ್ಯೂಸೆಕ್ ನಷ್ಟಿದೆ. ಒಳ ಹರಿವು ದಿಢೀರ್ ಏರಿಕೆ ಯಾಗಿರುವುದು ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ರೈತರಲ್ಲಿ ಸಂತಸ ಮನೆಮಾಡಿದೆ.ಭ
- ಭದ್ರಾ ಜಲಾಶಯ ನೀರಿನ ವಿವರ
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಗರಿಷ್ಠ : 186 ಅಡಿ
- ಇಂದಿನ ಮಟ್ಟ: 122.3 ಅಡಿ
- ಒಳ ಹರಿವು : 8,655 ಕ್ಯೂಸೆಕ್
- ಹೊರ ಹರಿವು : 345 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 137.0ಅಡಿ
ಮೂರ್ನಾಲ್ಕು ದಿನದಿಂದ ಹಿನ್ನೀರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದ್ದರಿಂದ ಜಲಾಶಯದ ಒಳ ಹರಿವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜೂ.24 ರಂದು ಡ್ಯಾಂ ಒಳ ಹರಿವು 771 ಕ್ಯೂಸೆಕ್ ಇತ್ತು. 25ರಂದು 1419 ಕ್ಯೂಸೆಕ್ ಇತ್ತು. ಜೂ.26 2276 ಕ್ಯೂಸೆಕ್ ಇತ್ತು. ಇವತ್ತು ಒಮ್ಮೆಲೇ 8,655 ಕ್ಯೂಸೆಕ್ ಗೆ ಏರಿಕೆಯಾಗಿದೆ.



