ದಾವಣಗೆರೆ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಸಕಾಲದಲ್ಲಿ ನೀರು ತಲುಪಿಸಲು ಹಗಲು ರಾತ್ರಿ ಎನ್ನದೇ ಕೆಲಸ ಮಾಡುವ ನೀರು ಗಂಟಿಗಳು ನಮ್ಮ ರೈತರಷ್ಟೇ ಸಮಾನರು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.
ತಾಲ್ಲೂಕು ಬೇತೂರು – ಕಾಡಜ್ಜಿ ನಡುವೆ ಬರುವ ಆರ್-4 ವಿತರಣಾ ನಾಲೆಯಲ್ಲಿ ರೈತರೊಂದಿಗೆ ಹಾಗೂ ನೀರು ಗಂಟಿಗಳೊಂದಿಗೆ ಸ್ನೇಹಮಯ ವಾತಾವರಣ ನಿರ್ಮಾಣ ಮಾಡಲು ಹಮ್ಮಿಕೊಂಡಿದ್ದ ಔತಣಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನೀರು ಗಂಟಿ ರವಿ ಮತ್ತು ಕುಬೇರ ಅವರು ಮಾತನಾಡಿ, ಕಳೆದ 25 ವರ್ಷಗಳಿಂದ ನಿರಂತರವಾಗಿ ಈ ಭಾಗದಲ್ಲಿ ನೀರು ನಿರ್ವಹಣೆ ಹಾಗೂ ನೀರಾವರಿ ಇಲಾಖೆಯ ಅವಶ್ಯಕ ಸೇವೆಯನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದು, ಎಷ್ಟೇ ಪ್ರಯತ್ನ ಪಟ್ಟರು ಇಲ್ಲಿಯವರೆಗೂ ನಮಗೆ ಕನಿಷ್ಠ ಮೂಲಭೂತ ಸೌಕರ್ಯ ದೊರಕದಿರುವುದು ನೋವುಂಟು ಮಾಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಖಾಸಗಿ ಕಂಪನಿಗೆ ಗುತ್ತಿಗೆ ನೀಡುವುದನ್ನು ರದ್ದು ಪಡಿಸಿ ನೇರವಾಗಿ ನೀರಾವರಿ ಇಲಾಖೆಯಿಂದ ವೇತನ ನೀಡಬೇಕು ಅಥವಾ ಕನಿಷ್ಟ ವೇತನ ಜಾರಿ ಮಾಡುವಂತೆ ಅಥವಾ 20 ವರ್ಷಕ್ಕಿಂತ ಅಧಿಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ಕೆಲಸಕ್ಕೆ ತಗೆದುಕೊಳ್ಳುವಂತೆ ಈ ಸಮಯದಲ್ಲಿ ಒಕ್ಕೊರಲಿನಿಂದ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು, ನಿಮ್ಮ ನೋವು ಏನು ಎಂಬುದು ನನ್ನ ಅರಿವಿನಲಿದ್ದು, ಈ ಸಂಬಂಧ ಜಲ ಸಂಪನ್ಮೂಲ ಸಚಿವರೊಂದಿಗೆ ಈ ಕುರಿತು ಚರ್ಚಿಸಿ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸ್ಥಳೀಯ ರೈತ ಮುಖಂಡ ಬಸವರಾಜ್ ಮಾತನಾಡಿ, ನೀವು ಕಾಡಾ ಅಧ್ಯಕ್ಷರಾದ ನಂತರ ಬಹಳ ವರ್ಷಗಳಿಂದ ರೈತರು ಅನುಭವಿಸುತ್ತಿದ್ದ ಕಷ್ಟಗಳು ದೂರವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಾವಣಗೆರೆ ನಂ.01 ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜ್, ಭದ್ರಾ ಕಾಡಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಂದ್ರ, ಸಹಾಯಕ ಅಭಿಯಂತರ ಮಹಾಂತೇಶ್, ಶೀಲಾ, ಗೋವಿಂದ್ ರಾಜ್, ಹೆಮೋಜಿ ರಾವ್ ಹಾಗೂ ನೀರು ಬಳಕೆದಾರರ ಸಂಘದ ಶಿವಕುಮಾರ್ ಉಪಸ್ಥಿತರಿದ್ದರು.



