ದಾವಣಗೆರೆ: ಭದ್ರಾ ಜಲಾಶಯದಿಂದ ಬಲ ದಂಡೆ ನಾಲೆಗೆ ನೀರು ಸ್ಥಗಿತಗೊಳಿಸಿದ್ದರಿಂದ ಭದ್ರಾ ಅಚ್ಚುಕಟ್ಟಿನ ದಾವಣಗೆರೆ, ಹರಿಹರ, ಮಲೇಬೆನ್ನೂರು ಭಾಗದ ರೈತರ ಇಂದು ಹೋರಾಟ ತೀವ್ರಗೊಳಿಸಿದ್ದರು. ನಗರದ ಹೊರವಲಯದ ಹಳೇ ಕುಂದವಾಡ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರೈತರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಸಂಬಂಧ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆ ವಿಫಲವಾಗಿದ್ದು , ಸೆ.22ರಂದು ಬೆಳಿಗ್ಗೆ 11ಕ್ಕೆ ನಗರದ ಬೀರೇಶ್ವರ ದೇವಸ್ಥಾನದಿಂದ ಬೃಹತ್ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ ರೈತ ಮುಖಂಡರು ಎಚ್ಚರಿಸಿದ್ದಾರೆ.
ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಎಂವಿ, ಎಸ್ಪಿ ಉಮಾ ಪ್ರಶಾಂತ್ ಅವರು ರೈತರು ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವ ಯತ್ನ ನಡೆಸಿದರು. ಆದರೆ, ರೈತರು ನೀರಿಗೆ ಪಟ್ಟು ಹಿಡಿದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನಗಳ ಸಂದಣಿ ಹೆಚ್ಚಾಗಿ ಇಡೀ ಹೆದ್ದಾರಿ ಟ್ರಾಫಿಕ್ ಜಾಮ್ ಆಗಿತ್ತು. ಕೊನೆಗೆ ಜಿಲ್ಲಾಧಿಕಾರಿ ಹಾಗು ಎಸ್ಪಿ ಇಬ್ಬರು ಮನವೊಲಿಸಿದ್ದರಿಂದ ರೈತರು ಹೆದ್ದಾರಿ ಬಂದ್ ಧರಣಿ ಕೈಬಿಟ್ಟು ಸಂಜೆ ಸಭೆಗೆ ಆಗಮಿಸಿದ್ದರು.
ಸಂಜೆ ನಡೆದ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ಸಭೆ ವಿಫಲವಾಯಿತು. ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ಸಭೆಯಲ್ಲಿ ಹಾಜರಿದ್ದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಸುಜಾತ ಅವರಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ನಮಗೆ ಸಭೆ ಮುಖ್ಯವಲ್ಲ. ನೀರು ಹರಿಸುವ ಆದೇಶದ ಪ್ರತಿ ನೀಡಬೇಕು ಎಂದು ರೈತರು ಪಟ್ಟು ಹಿಡಿದರು.
ನೀರಾವರಿ ಇಲಾಖೆಯ ಆದೇಶದ ಮೇರೆಗೆ ಭತ್ತ ನಾಟಿ ಮಾಡಲಾಗಿದೆ. ಜಲಾಶಯದಲ್ಲಿ ಕುಡಿಯುವ ಕೈಗಾರಿಕೆ ಮತ್ತು ಡೆಡ್ ಸ್ಟೋರೇಜ್ ಹೊರತುಪಡಿಸಿ ನೀರಾವರಿಗೆ 22.89 ಟಿಎಂಸಿ ಲಭ್ಯವಿದ್ದು ಮುಂದಿನ 60 ದಿನಗಳಲ್ಲಿ ನಿರಂತರವಾಗಿ ನೀರು ಹರಿಸಿದರೆ ಭತ್ತದ ಬೆಳೆ ರೈತರ ಕೈಗೆ ಸಿಗಲಿದೆ. ಬೆಳೆ ಬಾರದಿದ್ದಲ್ಲಿ ರೈತರಿಗೆ ನಷ್ಟ ಹಾಗೂ ಮೇವಿನ ಕೊರತೆಯಾಗಲಿದ್ದು ತಕ್ಷಣವೇ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದರು.
ಆನ್ ಅಂಡ್ ಆಫ್ ವ್ಯವಸ್ಥೆಯಡಿ ಕೊನೆಯ ಭಾಗದ ರೈತರಿಗೆ ತಲುಪಲು ಕನಿಷ್ಠ 15 ದಿನಗಳು ಬೇಕಾಗುತ್ತದೆ. 2600 ಕ್ಯೂಸೆಕ್ ಕಡಿಮೆ ಮಾಡಿಯಾದರೂ ಪರವಾಗಿಲ್ಲ. ಕಾಲುವೆಗಳಿಗೆ ನಿರಂತರವಾಗಿ ಹರಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ ಜಲಾಶಯದಲ್ಲಿ ಕಡಿಮೆ ನೀರು ಇದ್ದಾಗಲೂ ಮಳೆಗಾಲದಲ್ಲಿ ನೀರು ಹರಿಸಲಾಗಿತ್ತು. ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವಿದ್ದು ಸಲಹಾ ಸಮಿತಿ ತೀರ್ಮಾನವನ್ನು ಪುನರ್ ಎಂದು ರೈತರು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ಮಾತನಾಡಿ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ. ಪುನರ್ ಪರಿಶೀಲನೆ ನಡೆಸಿ ನೀರು ಹರಿಸಲು ಸೂಕ್ತ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಈ ಬಗ್ಗೆ ನೀರಾವರಿ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು.ಅನಧಿಕೃತ ಪಂಪ್‍ಸೆಟ್‌ಗಳ ತೆರವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಬೆಸ್ಕಾಂ ಮತ್ತು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಎನ್.ಸುಜಾತ ರೈತ ಮುಖಂಡರಾದ ವೀರೇಶ್ ಹನಗವಾಡಿ ನಂದಿಗಾವಿ ಶ್ರೀನಿವಾಸ್ , ರೈತರು ಇದ್ದರು.
ದಾವಣಗೆರೆ: ಮೂರು ವರ್ಷದ 30ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು
ದಾವಣಗೆರೆ: ಸೆ.26ರಂದು ಉಚಿತ ಅಣಬೆ ಬೆಳೆ ತರಬೇತಿ ಶಿಬಿರ
ದಾವಣಗೆರೆ: ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರದಂತೆ 100 ದಿನ ನೀರು ಹರಿಸದಿದ್ರೆ ಬೀದಿಗಿಳಿದು ಹೋರಾಟ; ಸಂಸದ ಜಿ.ಎಂ. ಸಿದ್ದೇಶ್ವರ