ದಾವಣಗೆರೆ: ಎಸ್.ಕೆ. ಗ್ರೂಪ್ , ರಾಜ್ಯ ಪವರ್ ಲಿಫ್ಟಿಂಗ್ ಸಂಸ್ಥೆ ಹಾಗೂ ದಾವಣಗೆರೆ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ಸಹಯೋಗದೊಂದಿಗೆ ಪುರುಷ ಹಾಗೂ ಮಹಿಳೆಯರ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಗಳು ಅ.8,9ರಂದು ನಗರದ ಶ್ರೀ ಶಿವಯೋಗಿ ಮಂದಿರದ ಶ್ರೀ ಜಯದೇವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಕಾರ್ಯದರ್ಶಿ ಕೆ. ಗಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ಬೆಂಚ್ ಪ್ರೆಸ್ ಕ್ರೀಡೆ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಿರುವುದು ಸಂತಸದ ವಿಷಯವಾಗಿದೆ. ದಾವಣಗೆರೆಯಲ್ಲಿ 70-80 ರ ದಶಕದಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹದ ಕಾರಣ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ದಾವಣಗೆರೆಯ 7-8 ಕ್ರೀಡಾಪಟುಗಳಿರುತ್ತಿದ್ದರು. ಆದರೆ ಈಗ ಈ ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಆಗಿದೆ. ಹೆಚ್ಚಿನ ಮಟ್ಟದ ಪ್ರೋತ್ಸಾಹ ದೊರೆಯಬೇಕಿದೆ ಎಂದರು.
ಅ.8ರಂದು ಬೆಳಿಗ್ಗೆ 11.30 ಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶಾಸಕ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಮಾಜಿ ಮೇಯರ್, ಬಿ.ಜಿ. ಅಜಯ್ ಕುಮಾರ್, ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ಅಧ್ಯಕ್ಷ ಪಿ.ಜಿ. ಪಾಂಡುರಂಗ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಂತಾರಾಷ್ಟ್ರೀಯ ಕ್ರೀಡಾಪಟು, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸತೀಶ್ ಕುಮಾರ್ ಕುದ್ರೋಳಿ, ಶ್ರೀನಿವಾಸ್ ದಾಸಕರಿಯಪ್ಪ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಸಮಾರೋಪ ಸಮಾರಂಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಡಾ. ಪ್ರಭಾ ಮಲ್ಲಿಕಾರ್ಜುನ, ಎಸ್. ರಾಮಪ್ಪ ಭಾಗಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್. ಕೆ. ಗ್ರೂಪ್ ಸಂಸ್ಥೆಯ ಅಧ್ಯಕ್ಷ ಕೆ. ದುಗ್ಗಪ್ಪ, ಕಾರ್ಯಾಧ್ಯಕ್ಷ ಕೆ. ಮಂಜುನಾಥ್, ಕಾರ್ಯದರ್ಶಿ ಕೆ. ಕುಮಾರ್, ಪವರ್ ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಟಿ.ಜಿ. ಪಾಂಡುರಂಗ, ಹೆಚ್. ದಾದಾಪೀರ್ ಉಪಸ್ಥಿತರಿದ್ದರು.



