ದಾವಣಗೆರೆ: ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸುವುದನ್ನು ಸ್ಥಗಿತ ಮಾಡಿರುವುದನ್ನು ವಿರೋಧಿಸಿ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಕೊಟ್ಟ ಮಾತಿನಂತೆ ಭದ್ರಾ ಡ್ಯಾಂನಿಂದ ನಾಲೆಗೆ ನೂರು ದಿನಗಳ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್ ಉತ್ತಮ ಬೆಂಬಲ ವ್ಯಕ್ತವಾಯಿತು.
ಬೆಗ್ಗೆಯೇ ಜಯದೇವ ವೃತ್ತದಲ್ಲಿ ಸೇರಿದ ರೈತ ಮುಖಂಡ ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪಿಬಿ ರಸ್ತೆ, ಹದಡಿ ರಸ್ತೆ, ಎಪಿಎಂಸಿ, ಹಳೇ ದಾವಣಗೆರೆಯಲ್ಲಿ ಬೈಕ್ ಮೂಲಕ ತೆರಳಿದ ರೈತರು ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು.ರೈತ ಒಕ್ಕೂಟ ಕರೆ ನೀಡಿರುವ ಬಂದ್ ಗೆ ಬಿಜೆಪಿ, ಆಪ್ , ಜೆಡಿಎಸ್ ಸೇರಿದಂತೆ, ಕಾರ್ಮಿಕರು, ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಖಾಸಗಿ ಬಸ್ ಗಳ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಟೋ ಮಾಲೀಕರ ಸಂಘ, ಕ್ರಿಮಿನಾಶಕ, ರಸಗೊಬ್ಬರ ಜಿಲ್ಲಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದವು.
ಭದ್ರಾ ಅಚ್ಚುಕಟ್ಟಿನ ಪ್ರಮುಖ ಬೆಳೆಯಾದ ಭತ್ತಕ್ಕೆ ನಿರಂತರ 100 ದಿನ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದರಿಂದಲೇ ರೈತರು ಭತ್ತ ನಾಟಿ ಮಾಡಿದ್ದಾರೆ. ಇದೀಗ ಏಕಾಏಕಿ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಖಂಡನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅಂಗಡಿ ಮುಂಗಟ್ಟು ಸೇರಿದಂತೆ ಮುಚ್ಚಿದ್ಧು ಖಾಸಗಿ ಬಸ್ , ಆಟೋ, ಗೂಟ್ಸ್ ವಾಹನಗಳ ಓಡಾಟ ವಿರಳವಾಗಿತ್ತು. ಬಂದ್ ಗೆ ಬಿಜೆಪಿ, ಆಪ್ ಸೇರಿ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದರಿಂದ ನಗರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಿಗ್ಗೆಯೇ ಭಾರತೀಯ ರೈತ ಒಕ್ಕೂಟದ ಮುಖಂಡರು ರೈತರು ಜಯದೇವ ವೃತ್ತದಲ್ಲಿ ಜಮಾಯಿಸಿ ಪ್ರತಿಭಟಿಸಿದರು. ಬೆಳಿಗ್ಗೆ 9 ಗಂಟೆ ವೇಳೆಗೆ ಪತ್ರಿಭಟನೆ ತೀವ್ರತೆ ಪಡೆದಿತ್ತು. ರೈತರು ಪಿ. ಬಿ. ರಸ್ತೆ, ಪಿ. ಜೆ. ಬಡಾವಣೆ, ಎಸ್. ಎಸ್. ಲೇಔಟ್, ಹಳೇ ದಾಣಗೆರೆಗೆ ವ್ಯಾಪಿಸಿತು.ಆಟೋ ಸಂಚಾರ, ಖಾಸಗಿ ಬಸ್ ಗಳ ಓಡಾಟ ವಿರಳವಾಗಿದ್ದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಯಿತು. ನಗರದ ಗಾಂಧಿ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಬಂದ್ ಗೆ ಬಿಜೆಪಿ ಪಕ್ಷವು ಬೆಂಬಲ ಸೂಚಿಸಿದ್ದರಿಂದ ನಾಯಕರು ಬೀದಿಗಿಳಿದು ಬಂದ್ ಗೆ ಸಹಕರಿಸಿದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ಭದ್ರಾ ಡ್ಯಾಂನ ಬಲದಂಡೆ ದಾವಣಗೆರೆ ಜಿಲ್ಲೆಯ ಜೀವನಾಡಿಯಾಗಿದ್ದು, ನೀರಾವರಿ ಇಲಾಖೆ ನೀರು ಹರಿಸುವುದಾಗಿ ಭರವಸೆ ಕೊಟ್ಟು, ಈಗ ಆಗಲಲ್ಲ ಎನ್ನುತ್ತಿದೆ. ಇದರಿಂದಾಗಿ ರೈತರ ಜೀವನದ ಜೊತೆ ಸರ್ಕಾರ ಆಟ ಆಡುತ್ತಿದೆ. ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವ ಬದಲು ರಾಜಕೀಯ ಮಾಡಲು ಹೊರಟಿದೆ. ಇದು ಖಂಡನೀಯ ಆಕ್ರೋಶ ವ್ಯಕ್ತಪಡಿಸಿದರು.
ಜಯದೇವ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಲು ರೈತ ಮುಂಡರು, ಬಿಜೆಪಿ ನಾಯಕರು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.ಆಗ ಮಾತಿನ ಚಕಮಕಿಯೂ ನಡೆಯಿತು. ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾರ್ಗದರ್ಶನಲ್ಲಿ ಕಾನೂನು ಸುವ್ಯವಸ್ಥೆ ಕೈಗೊಳ್ಳಲಾಗಿತ್ತು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಾಸಕ ಬಿ. ಪಿ. ಹರೀಶ್ , ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ. ಎಂ. ಸತೀಶ್, ಕುಂದುವಾಡದ ಅಣ್ಣಪ್ಪ, ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಕಲ್ಲಿಂಗಪ್ಪ, ಬಸವರಾಜ್, ಮೋಹನ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.