ದಾವಣಗೆರೆ: ಜಿಲ್ಲೆಯ 7 ವಿಧಾನಸಭೆ ಚುನಾವಣೆ ಫಲಿತಾಂಶ ಇಂದು (ಮೇ13) ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಇದಕ್ಕೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಶಿವಗಂಗೋತ್ರಿಯಲ್ಲಿ ನಡೆಯಲಿದೆ. ನಾಲೆಜ್ ಬ್ಲಾಕ್‍ನ ಮೊದಲ ಮಹಡಿಯಲ್ಲಿ 103.ಜಗಳೂರು, 106. ದಾವಣಗೆರೆ ಉತ್ತರ, 108 ಮಾಯಕೊಂಡ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಸೈನ್ಸ್ ಬ್ಲಾಕ್ ಮೊದಲ ಮಹಡಿಯಲ್ಲಿ 105.ಹರಿಹರ, 107 ದಾವಣಗೆರೆ ದಕ್ಷಿಣ, ಸೋಷಿಯಲ್ ಸೈನ್ಸ್ ಬ್ಲಾಕ್ ಮೊದಲ ಮಹಡಿಯಲ್ಲಿ 109.ಚನ್ನಗಿರಿ, 110.ಹೊನ್ನಾಳಿ ಕ್ಷೇತ್ರಗಳ ಮತ ಎಣಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
14 ಟೇಬಲ್‍ಗಳಲ್ಲಿ ಎಣಿಕೆ: ಪ್ರತಿ ಕ್ಷೇತ್ರದಲ್ಲಿ 14 ಎಣಿಕೆ ಟೇಬಲ್‍ಗಳ ಮೂಲಕ ಎಣಿಕೆ ನಡೆಯಲಿದ್ದು ಮೈಕ್ರೋ ಅಬ್ಸರ್‍ವರ್, ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕರು ಇರುವರು. ಬೆಳಗ್ಗೆ 8 ಗಂಟೆಗೆ ಬ್ಯಾಲೆಟ್ ಎಣಿಕೆ ನಡೆಯಲಿದೆ. 8.30 ಕ್ಕೆ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 7 ಕ್ಷೇತ್ರಗಳಿಂದ 98 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು 196 ಎಣಿಕೆ ಸಿಬ್ಬಂದಿ, 105 ಮೈಕ್ರೋ ಅಬ್ಸರ್‍ವರ್‍ಗಳಿರುವರು. ಅಂಚೆ ಮತ ಎಣಿಕೆಗೆ 24 ಟೇಬಲ್‍ಗಳಿಗೆ 72 ಸಿಬ್ಬಂದಿ, 24 ಮೈಕ್ರೋ ಅಬ್ಸರ್‍ವರ್, ಸೇವಾ ಮತದಾರರ ಮತ ಎಣಿಕೆಗೆ ಪ್ರತಿ ಕ್ಷೇತ್ರಕ್ಕೆ ಒಂದು ಟೇಬಲ್ ಇರಲಿದ್ದು ಒಟ್ಟು 28 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಎಣಿಕೆಗೆ ಮೀಸಲಿರಿಸಲಾಗಿದೆ ಎಂದರು.
19 ರೌಂಡ್ಸ್ ವರೆಗೆ ಎಣಿಕೆ: ಮತ ಎಣಿಕೆಯು ಕನಿಷ್ಠ 15 ರಿಂದ ಗರಿಷ್ಠ 19 ಸುತ್ತಿನವರೆಗೆ ಎಣಿಕೆ ನಡೆಯಲಿದೆ. ಇದರಲ್ಲಿ ಜಗಳೂರು 262 ಮತಗಟ್ಟೆಗಳು 19 ಸುತ್ತು, ಹರಿಹರ 228 ಮತಗಟ್ಟೆಗಳಿದ್ದು 16 ಸುತ್ತುಗಳು, ದಾವಣಗೆರೆ ಉತ್ತರ 242 ಮತಗಟ್ಟೆ 17 ಸುತ್ತು, ದಾವಣಗೆರೆ ದಕ್ಷಿಣ 214 ಮತಗಟ್ಟೆ 15 ಸುತ್ತು, ಮಾಯಕೊಂಡ 240 ಮತಗಟ್ಟೆ 17 ಸುತ್ತು, ಚನ್ನಗಿರಿ 254 ಮತಗಟ್ಟೆ 18 ಸುತ್ತು, ಹೊನ್ನಾಳಿ 245 ಮತಗಟ್ಟೆಗಳಿಗೆ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ ಎಂದರು.



