ದಾವಣಗೆರೆ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಮತದಾನಕ್ಕೆ ಅಡ್ಡಿಯಾಗಿದೆ. ಸಂಜೆ 4 ಗಂಟೆಗೆ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ. ಚನ್ನಗಿರಿ, ಹರಿಹರ ದಾವಣಗೆರೆ ಸೇರಿದಂತೆ ಕೆಲ ಕಡೆ ಮಳೆಯಾಗಿದೆ.
ಜಿಲ್ಲಾ ಪ್ರಮುಖ ನಾಯಕರಿಂದ ಮತದಾನ; ತರಳಬಾಳು ಬಡಾವಣೆ ಮಾಗನೂರು ಬಸಪ್ಪ ಶಾಲೆಯಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಮತ ಚಲಾವಣೆ ಮಾಡಿದರು. ಬಳಿಕ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಹಾಗೂ ಉತ್ತರ ಸಹಿತ ಜಿಲ್ಲೆಯಲ್ಲಿ ಎಂಟು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ್ ತಮ್ಮ ತಂದೆ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಆಗಮಿಸಿ ಐಎಂಎ ಹಾಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಎಸ್‌ಎಸ್ ಮಲ್ಲಿಕಾರ್ಜುನ್ ಅವರ ಪುತ್ರಿ ಶ್ರೇಷ್ಠ ಶಾಮನೂರು ಹಾಗೂ ಸಮರ್ಥ ಶಾಮನೂರು ಅವರು ಮೊಟ್ಟಮೊದಲ ಬಾರಿಗೆ ಮತದಾನ ಮಾಡಿದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯ, ಹೊನ್ನಾಳಿ ನಗರದ ಹಿರೇಮಠದಲ್ಲಿರುವ ಶ್ರೀ ಚನ್ನಕೇಶವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂ 105 ರಲ್ಲಿ ಮತ ಚಲಾವಣೆ ರೇಣುಕಾಚಾರ್ಯಗೆ ಪತ್ನಿ ಸುಮಾ ರೇಣುಕಾಚಾರ್ಯ ಸಾಥ್ ನೀಡಿದರು.
ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ್ ಕುಮಾರ್ ಕುಟುಂಬ ಸಮೇತರಾಗಿ ಬಂದು ಹಕ್ಕು ಚಲಾಯಿಸಿದರು. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಬಕ್ಕೇಶ್ವರ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಿದರು.



