ದಾವಣಗೆರೆ; ನಗರದ ಅಶೋಕ ಚಿತ್ರಮಂದಿರದ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಕೆಳಸೇತುವೆ ಕಾಮಗಾರಿ ಜನವರಿ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ದಾವಣಗೆರೆ ನಗರದ ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ 199ಕ್ಕೆ ಪರ್ಯಾಯವಾಗಿ ನಿರ್ಮಾಣಗೊಳ್ಳುತ್ತಿರುವ ಕೆಳಸೇತುವೆ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಪ್ರಿಕಾಸ್ಟಿಂಗ್ ಬಾಕ್ಸ್‍ಗಳನ್ನು ಅಳವಡಿಸಲಾಗಿದ್ದು, ಸಂಪರ್ಕ ರಸ್ತೆ ನಿರ್ಮಾಣದ ಕಾರ್ಯದ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೆಳ ಸೇತುವೆಯಲ್ಲಿ ಕಾರು, ದ್ವಿ ಚಕ್ರವಾಹನಗಳು, ತಳ್ಳುಗಾಡಿಗಳು ಮಾತ್ರ ಸಂಚರಿಸಬಹುದಾಗಿದೆ. ಪದ್ಮಾಂಜಲಿ ಚಿತ್ರಮಂದಿರ ಎದುರುಗಡೆ 4.75 ಮೀಟರ್ ಎತ್ತರದ ಮತ್ತು 10 ಮೀಟರ್ ಅಗಲದ ಎರಡು ವೆಂಟ್ ಅಳವಡಿಸುವ ಪ್ರಸ್ತಾವನೆ ಇದೆ. ರೈಲ್ವೆಹಳಿಗೆ ಸಮಾನಾಂತರವಾಗಿ ರಸ್ತೆ ನಿರ್ಮಾಣಮಾಡುವ ಅವಶ್ಯಕತೆ ಇದ್ದು, ಒಂದೆರಡು ಕುಟುಂಬಗಳು ರಸ್ತೆ ನಿರ್ಮಾಣಕ್ಕೆ ಜಾಗೆ ಬಿಟ್ಟುಕೊಡಬೇಕಾಗಿದೆ. ಸದರಿಯವರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಈ ಕುಟುಂಬದವರು ಜಾಗೆ ಬಿಟ್ಟುಕೊಟ್ಟರೆ ಪೂರ್ಣ ಪ್ರಮಾಣದ ಸೇತುವೆ ನಿರ್ಮಾಣವಾಗಲಿದೆ ಎಂದು ಸಂಸದರು ಮಾಹಿತಿ ನೀಡಿದರು.
ರೈಲ್ವೆ ಕಾಮಗಾರಿಗಳ ಪ್ರಗತಿಯನ್ನು ಸಹಾಯಕ ಇಂಜನೀಯರ್ ನವೀನ್ ಅವರು ಸಂಸದರಿಗೆ ವಿವರಿಸಿದರು.ಈ ಸಂರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ, ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ, ದೂಡಾ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್, ಮಾಜಿ ಮಹಾಪೌರ ಎಸ್.ಟಿ.ವೀರೇಶ, ಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೀಶ, ಸ್ಮಾರ್ಟ್ ಸಿಟಿ ಇಂಜಿನಿಯರ್ ಮಂಜುನಾಥ್ ಇತರ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.



