ದಾವಣಗೆರೆ; ಬಹು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದ ದಾವಣಗೆರೆ ನಗರದ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್ ಸಮಸ್ಯೆಗೆ ಇದೀಗ ಪರಿಹಾರ ಸಿಕ್ಕಾಂತಾಗಿದೆ.
ಸದಾ ಟ್ರಾಫಿಕ್ ಕಿರಿಕ್ ನಿಂದ ಕೂಡಿರುತ್ತಿದ್ದ ಅಶೋಕ ರಸ್ತೆ ಹಳೆ ಮತ್ತು ಹೊಸ ದಾವಣಗೆರೆ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯಲ್ಲಿ ರೈಲ್ವೆ ಗೇಟ್ ಹಾಕಿದರಂತೂ ಪ್ರಯಾಣಿಕರು ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರು. ಇಂತಹ ಬಹು ದಶಕಗಳ ಬೇಡಿಕೆಯಾಗಿದ್ದ ನಗರದ ಅಶೋಕ ಚಿತ್ರಮಂದಿರ ಬಳಿಯ ರೈಲ್ವೆ ಅಂಡರ್ ಪಾಸ್ ಕನಸು ನನಸಾಗಿದ್ದು, ಇಂದು ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.
ರೈಲ್ವೆ ಕೆಳಸೇತುವೆ ನಿರ್ಮಾಣ ಹಾಗೂ ರಸ್ತೆಯನ್ನು 60 ಅಡಿ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ದಾವಣಗೆರೆ ನಗರದ ಪ್ರಮುಖ ಜನನಿಬಿಡ ರಸ್ತೆಯಾಗಿರುವ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್‍ಗೆ ಪರ್ಯಾಯವಾಗಿ ಎರಡು ಮಾರ್ಗದ ಕೆಳ ಸೇತುವೆ ನಿರ್ಮಾಣ ಹಾಗೂ ಇಲ್ಲಿಂದ ಈರುಳ್ಳಿ ಮಾರ್ಕೆಟ್‍ಗೆ ಸಂಪರ್ಕ ಕಲ್ಪಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸಿತ್ತು.
ಇದೀಗ ಕಾಮಗಾರಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇಂದಿನಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಇಂದು ನೂರಾರು ವಾಹನ ಸವಾರರು ಅಂಡರ್ ಪಾಸ್ ಮಾರ್ಗವಾಗಿ ಸಂಚರಿಸಿದರು.



