ದಾವಣಗೆರೆ: ಸಹೋದರ ಸಂಬಂಧಿಗಳ ಹೊಟ್ಟೆಕಿಚ್ಚಿಗೆ 12 ವರ್ಷದ ಫಲಕ್ಕೆ ಬಂದಿದ್ದ ನೂರಾರು ಅಡಿಕೆ ಮರ ಬಲಿಯಾಗಿವೆ. ಈ ಘಟನೆ ನಡೆದಿರುವುದು ದಾವಣಗೆರೆ ತಾಲೂಕಿನ ಕಂದಗಲ್ ಗ್ರಾಮದ ಗುರುಮೂರ್ತಿ ಎಂಬ ರೈತನಿಗೆ ಸೇರಿದ ಅಡಿಕೆ ತೋಟದಲ್ಲಿ.
ಸಹೋದರರ ಹೊಟ್ಟೆಕಿಚ್ಚಿಗೆ ಯಂತ್ರದಿಂದ ಫಲಕ್ಕೆ ಬಂದಿದ್ದ ಎರಡು ಸಾಲು ಅಡಿಕೆ ಮರ ಕತ್ತರಿಸಿ ಹಾಕಲಾಗಿದೆ. ಬರೋಬರಿ 108 ಮರಗಳನ್ನ ಕಡಿದು ಹಾಕಿದ್ದಾರೆ. ವಯಸ್ಸಿಗೆ ಬಂದ ಮಕ್ಕಳಂತೆ ಬೆಳೆಸಿದ ಮರಗಳ ಮಾರಣಹೋಮ ನಡೆದಿದೆ. ದುಷ್ಟರು ಮರ ಕಟ್ ಮಾಡು ಯಂತ್ರ ಬಳಸಿ ಅಡಿಕೆ ಮರಗಳನ್ನು ಕಟ್ ಮಾಡಿ ಬಿಸಾಕಿದ್ದಾರೆ. ತೋಟದ ಮಾಲೀಕ ಗುರುಮೂರ್ತಿ ಬೆಳಗ್ಗೆ ತೋಟಕ್ಕೆ ಬಂದಾಗ ಆಕಾಶವೇ ಕಳಚಿ ಬಿದ್ದಂತಾಗಿದೆ.
ಗುರುಮೂರ್ತಿ ಅವರ ಸಹೋದರ ಸಂಬಂಧಿ ಕೆಪಿ ಮಂಜಪ್ಪ ಈ ಕೃತ್ಯ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಮೊದಲು ಅಡಿಕೆ ತೋಟ ಮಂಜಪ್ಪ ಅವರ ಪಾಲಿಗೆ ಇತ್ತು. ಕಳೆದ ಕೆಲ ವರ್ಷಗಳ ಹಿಂದೆ ಸರ್ವೇ ಮಾಡಿಸಿದಾಗ ಗುರುಮೂರ್ತಿ ಅವರ ಪಾಲಿಗೆ ಬಂದಿದೆ. ಅಡಿಕೆ ತೋಟ ಅವರಿಗೆ ಹೋಯ್ತಲ್ಲ ಎಂದು ಹೊಟ್ಟೆ ಕಿಚ್ಚಿನಿಂದ ಮರಗಳನ್ನು ಕಟ್ ಮಾಡಿ ಹಾಕಿದ್ದಾರೆ.
ಬೆಳಿಗ್ಗೆ ಐದು ಗಂಟೆಗೆ ಕಟ್ಟಿಂಗ್ ಯಂತ್ರದಿಂದ ಸಂಬಂಧಿಕರ ಜೊತೆ ಸೇರಿ ಅಡಿಕೆ ಮರ ಕಟ್ ಮಾಡಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದ ಜನ ಇದನ್ನ ಗಮನಿಸಿ ತೋಟದ ಮಾಲೀಕ ಗುರುಮೂರ್ತಿಗೆ ಮಾಹಿತಿ ನೀಡಿದ್ದಾರೆ. ಗುರುಮೂರ್ತಿ ತೋಟಕ್ಜೆ ಬರುಷ್ಟರಲ್ಲಿಯೇ 108 ಮರ ಕಟ್ ಮಾಡಿ ಹಾಕಿದ್ದಾರೆ. ಈ ಬಗ್ಗೆ ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ 55 ಸಾವಿರ ರೂಪಾಯಿ ಇದೆ. ಕಷ್ಟಪಟ್ಟು ಸಾಕಿದ ಮರ ಸಂಬಂಧಿಕರೇ ಕಟ್ ಮಾಡಿಹಾಕಿರುವುದು ದುರಂತವೇ ಸರಿ.



