ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಸತತ ದರ ಕುಸಿತದಿಂದ ಕಂಗೆಟ್ಟಿದ್ದ ರೈತರರಲ್ಲಿ ತುಸು ನೆಮ್ಮದಿ ತಂದಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಕೆ ಮಾಡಿದ್ರೆ 100 ರೂ.ಗಳಷ್ಟು ದರ ಚೇತರಿಕೆ ಕಂಡಿದೆ. ಹೊಸ ವರ್ಷ 2024ರ ಆರಂಭದಿಂದಲೂ ಏರಿಮುಖದಲ್ಲಿದ್ದ ಅಡಿಕೆ ದರ ಜ. 15ರ ನಂತರ ಕುಸಿತ ಕಂಡಿತ್ತು. ಒಂದು ತಿಂಗಳಲ್ಲಿ 2,300 ರೂ.ಗಳಷ್ಟು ಕುಸಿದಿದೆ.
ಈಗಾಗಲೇ ಕೊಯ್ಲು ಪೂರ್ಣಗೊಂಡಿದ್ದು, ಹೊಸ ಹೊಂಬಾಳೆ ಶುರುವಾಗಿವೆ. ಆದರೆ, ಜಿಲ್ಲೆಯಲ್ಲಿ ಬರದ ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು, ಬೋರ್ ವೆಲ್ ಗಳು ಬತ್ತಿ ಹೋಗುತ್ತಿವೆ. ಈ ಬೇಸಿಗೆಯಲ್ಲಿ ಅಡಿಕೆ ತೋಟ ಉಳಿಸಿಕೊಂಡ್ರೆ ಸಾಕು ಎನ್ನುವಂತಾಗಿದೆ. ಈ ವರ್ಷದ ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.
ಸದ್ಯ ಮಾರುಕಟ್ಟೆ ಕುಸಿತದಲ್ಲಿದ್ದು, ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಮುಂದೆ ಒಳ್ಳೆ ರೇಟ್ ಸಿಗುವ ಸಾಧ್ಯತೆ ಇದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಫೆ.19ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 48,379 ರೂ.ಗಳಿದ್ದು, ಕನಿಷ್ಠ ಬೆಲೆ 46,259 ರೂ.ಗಳಾಗಿದೆ.
2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ವರ್ಷದಲ್ಲಿಯೇ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ಕೊನೆಯ ವಾರ ಮತ್ತೆ 47,800 ರೂ.ಗೆ ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು.ಇದೀಗ 2024 ಜನವರಿ 15ರಂದು ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಿಂದ ಸತತ ಕುಸಿತ ಕಂಡು ಈಗ 48 ಸಾವಿರ ತಲುಪಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಫೆ.19ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46,529 ರೂ, ಗರಿಷ್ಠ ಬೆಲೆ 48,479 ಹಾಗೂ ಸರಾಸರಿ ಬೆಲೆ 47,534 ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 33,729 ರೂ.ಗೆ ಮಾರಾಟವಾಗಿದೆ.