ದಾವಣಗೆರೆ; ಜಿಲ್ಲೆಯಾಧ್ಯಂತ ಸುರಿದ ಭಾರೀ ಮಳೆಗೆ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕೆ ರೋಗ, ಸುಳಿ ಕೊಳೆ ರೋಗ, ಶಂಕುಹುಳ ಭಾದೆ, ಕಾಯಿ ಉದುರುವ ಸಮಸ್ಯೆ ತೀವ್ರವಾಗಿದೆಯೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ರವರು ಮತ್ತು ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ತಿಳಿಸಿದರು.
ಜಿಲ್ಲೆಯ ಕಂದಗಲ್ಲು, ಬಾಡ, ಚಿಕ್ಕಬೆನ್ನೂರು, ಕೆಂಪನಹಳ್ಳಿ, ಕಾಕನೂರು ಸುತ್ತ ಹತ್ತಾರು ಅಡಿಕೆ ತೋಟಗಳಿಗೆ ವೈಜ್ಞಾನಿಕ ಕ್ಷೇತ್ರ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಿದರು. ಅತೀಯಾದ ತೇವಾಂಶದಿಂದ ಸಣ್ಣ ಗಿಡಗಳಿರುವ ತೋಟಗಳಲ್ಲಿ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳೆವಣಿಗೆ ಕುಂಠಿತವಾಗಿದೆ. ಇಂತಹ ತಾಕುಗಳಲ್ಲಿ ರೈತರು ನೀರು ಬಸಿಯದೇ ಇರುವ ತೋಟಗಳಲ್ಲಿ ಬಸಿಗಾಲುವೆಗಳನ್ನು ತೆಗೆಸಬೇಕು. ತಕ್ಷಣವೇ ಗಿಡಗಳಿಗೆ ಶಿಲೀಂಧ್ರನಾಶಕ ಸಾಫ್ 2/ಗ್ರ‍್ರಾಂ, 13:0:45 ಮುಖ್ಯ ಪೋಷಕಾಂಶ 5 ಗ್ರಾಂ, ಲಘು ಪೋಷಕಾಂಶದ ಮಿಶ್ರಣ ೪ ಮಿಲೀ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕೆಂದರು.
ಹಿಂಗಾರು ಹಂಗಾಮಿಗೆ ಪೋಷಕಾಂಶಗಳನ್ನು ಪೂರೈಸಲು ಸೂಕ್ತ ಸಮಯವಿದ್ದು, 10 ವರ್ಷ ಮೇಲ್ಪಟ್ಟ ಗಿಡಗಳಿಗೆ 10:26:26 200 ಗ್ರಾಂ, ಪೂಟ್ಯಾಷ್ – 100 ಗ್ರಾಂ, ಬೀಟಲ್ ಮಿಕ್ಸ್ -100 ಗ್ರ‍್ರಾಂ ಪತ್ರೀ ಗಿಡಕ್ಕೆ ಕೊಡಬೇಕು. ಇದರಿಂದ ಗಿಡಗಳಿಗೆ ಬೇಗನೇ ಚೇತರಿಕೆಯ ಶಕ್ತಿ ಬರುತ್ತದೆ ಎಂದು ಭೇಟಿಯ ಸಮಯದಲ್ಲಿ ತಿಳಿಸಿದರು.
ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಅವಿನಾಶ್ ಟಿ.ಜಿ. ರವರು ಮಾತನಾಡಿ, ಸುಳಿ ತಿಗಣಿಯ ಭಾದೆ ಹೆಚ್ಚಾಗಿದ್ದು ನಿಯಂತ್ರಿಸಲು ಥೈಯಾಮೆಥಾಕ್ಸಾನ್ 0.5 ಗ್ರಾಂ, ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿ ಹಾಗೂ ಶಂಕುಹುಳು ಭಾದೆಯ ತಾಕುಗಳಲ್ಲಿ ಹುಳುಗಳನ್ನು ಕೈಯಿಂದ ಆರಿಸಿ ಉಪ್ಪು ನೀರಿನ ದ್ರಾವಣದಲ್ಲಿ ಹಾಕಿ ಸಾಯಿಸಬೇಕು. ತೋಟಗಳಲ್ಲಿ ಕಸ ಹೆಚ್ಚಿರುವ ಕಡೆ ಮೆಟಾಲ್ಡಿಹೈಡ್ ಕೇಕ್‌ನ್ನು ಅಲ್ಲಲ್ಲಿ ಇಡಬೇಕೆಂದು ತಿಳಿಸಿದರು. ಈ ಭೇಟಿಯ ಸಂದರ್ಭದಲ್ಲಿ ರೈತರಾದ ಗೌಡ್ರು ಮಲ್ಲಿಕಾರ್ಜುನ, ಹಾಲೇಶ್ ಮಾನಂಗಿ, ವೀರೇಶ್, ಕೈದಾಳ್ ಹಾಲೇಶ್, ಅನಿಲ್, ವೀರಾಚಾರಿ ಮತ್ತಿತರರು ಹಾಜರಿದ್ದರು.



