Connect with us

Dvgsuddi Kannada | online news portal | Kannada news online

ದಾವಣಗೆರೆ: ಆರ್ ಟಿಒ ಆಫೀಸ್ ಬಳಿ ಅಂಬೇಡ್ಕರ್ ಭವನ ನಿರ್ಮಾಣ; ಮೇ ತಿಂಗಳಲ್ಲಿ ಸಿಎಂ ಶಂಕುಸ್ಥಾಪನೆ

ದಾವಣಗೆರೆ

ದಾವಣಗೆರೆ: ಆರ್ ಟಿಒ ಆಫೀಸ್ ಬಳಿ ಅಂಬೇಡ್ಕರ್ ಭವನ ನಿರ್ಮಾಣ; ಮೇ ತಿಂಗಳಲ್ಲಿ ಸಿಎಂ ಶಂಕುಸ್ಥಾಪನೆ

ದಾವಣಗೆರೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭವನ ನಿರ್ಮಾಣಕ್ಕೆ ನಗರದ ಆರ್.ಟಿ.ಒ ಆಫೀಸ್ ಬಳಿ ಜಾಗ ಗುರುತಿಸಲಾಗಿದೆ. ಸಂಘಟನೆಗಳು ಒಪ್ಪಿಕೊಂಡಿದ್ದು, ಮೇ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಂಕು ಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ.ಬಾಬು ಜಗಜೀವನ ರಾಂ ಅವರ 114ನೇ ಜಯಂತ್ಯೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆಗಳನ್ನು ಪ್ರತಿಪಾದಿಸುವುದರೊಂದಿಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಅಂಬೇಡ್ಕರ್ ಆದರ್ಶ ಸ್ಮರಣೀಯ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಅವರು ಒಟ್ಟು 64 ವಿಷಯಗಳಲ್ಲಿ ಪರಿಣಿತರಾಗಿದ್ದು 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ವಾಕ್ಪಟು ಆಗಿದ್ದರು.ಬಾಬು ಜಗಜೀವನರಾಂ ಅಪ್ರತಿಮ ಸಂಘಟನಕಾರರು. ಇವರ ಪರಿಶ್ರಮದ ಫಲವಾಗಿ ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗಿದೆ. ಐದು ದಶಕಗಳ ಕಾಲ ಸಂಸದರಾಗಿದ್ದ ಜಗ ಜೀವನರಾಂ ಅವರು ರೈತರ ಆಹಾರ ಉತ್ಪಾದನೆಯ ಹೆಚ್ಚಾಳಕ್ಕೆ ಕಾರಣರಾಗಿದ್ದರು. ಹಾಗೂ ತಮಗೆ ದೊರೆತ ಕಾರ್ಮಿಕ, ಕೃಷಿ ರಕ್ಷಣಾ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂದರು.

ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಅಂಬೇಡ್ಕರ್ ಅವರು ಇಡೀ ದೇಶದ ವಿಶ್ವಕೋಶ. ಅವರಲ್ಲಿದ್ದ ಜ್ಞಾನದಿಂದ ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಟ ಮಾಡಿದವರು. ಸಮಸ್ಯೆಗಳನ್ನು ಮಾತ್ರ ಬಿಂಬಿಸದೆ ಪರಿಹಾರವನ್ನು ಸಹ ಸಂವಿಧಾನದ ಮೂಲಕ ತಿಳಿಸಿದರು. ಮಹಾನ್ ವ್ಯಕ್ತಿತ್ವದ ಚಿಂತಕರು. ಇಂತಹವರ ವಿಚಾರ ಆದರ್ಶಗಳನ್ನು ದಿನನಿತ್ಯ ಪಾಲನೆ ಮಾಡಬೇಕು. ಸಂವಿಧಾನವನ್ನು ಅರಿತ ಅಧಿಕಾರಿಗಳು ಶೋಷಿತ ವರ್ಗದವರಿಗೆ, ದಲಿತ ವರ್ಗದವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ದೊರಕಿಸಿ ಅವರ ಸೇವೆಗೆ ಪಾತ್ರರಾದರೆ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ತಾ.ಪಂ ಸದಸ್ಯ ಆಲೂರು ಲಿಂಗರಾಜು ಮಾತನಾಡಿ, ಸಮಾಜದ ಪರಿವರ್ತನೆಗೆ, ಏಳಿಗೆಗೆ, ಶೋಷಿತ ವರ್ಗದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಅನೇಕ ಹೋರಾಟಗಳನ್ನು ಮಾಡುತ್ತಾ ತಮ್ಮ ಜೀವನವನ್ನೇ ಪಣಕ್ಕಿಟ್ಟಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್ ಎಂದ ಅವರು ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಶೀಘ್ರ ಆಗಲಿ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಲು ದೂರದರ್ಶಿತ್ವ ಹೊಂದಿದ್ದ ಮಹಾನ್ ನಾಯಕ ಅಂಬೇಡ್ಕರ್ ಅವರು. ಅವರು ನೀಡಿದ ಸಂವಿಧಾನದ ಆಶಯ ಎಲ್ಲಾರಿಗೂ ದೊರೆಯುವುದು. ಕೊರೊನ ಹಿನ್ನೆಲೆಯಲ್ಲಿ ಈರ್ವರ ಜಯಂತಿಯನ್ನು ಸರಳವಾಗಿ ಆದರೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮೇ ಅಂತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರ ಭವನಕ್ಕೆ ಶಂಕು ಸ್ಥಾಪನೆ ನೆರವೇರಲಿದೆ ಎಂದರು.

ಈ ವೇಳೆ ಹೆಗ್ಗೆರೆ ರಂಗಪ್ಪ ಹಾಗೂ ಐರಣಿ ಚಂದ್ರು ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮತ್ತು ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಬಗೆಗೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಶಾಲಾ ಮಕ್ಕಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಾವಣಗೆರೆ ಉತ್ತರ ವಲಯದ ಶಾಸಕ ಎಸ್.ಎ.ರವೀಂದ್ರನಾಥ್, ಡಾ.ಹೆಚ್.ವಿಶ್ವನಾಥ್ ಹಸಿರು ಕ್ರಾಂತಿ ಹರಿಕಾರ ಬಾಬು ಜಗ ಜೀವನರಾಂ ಬಗೆಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಾಸಕರಾದ ಪ್ರೋ.ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಜಿ.ಪಂ. ಉಪಾಧ್ಯಕ್ಷರಾದ ಸಾಕಮ್ಮ ಗಂಗಾಧರ್ ನಾಯಕ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರಪ್ಪ, ಜಿ.ಪಂ ಸದಸ್ಯ ತೇಜಸ್ವಿ ಪಟೇಲ್, ಜಿ.ಪಂ ಸದಸ್ಯ ಬಸವಂತಪ್ಪ, ತಾ.ಪಂ ಸದಸ್ಯ ಆಲೂರು ಲಿಂಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಡಿಸಿ ಪೂಜಾರ್ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೌಸರ್ ರೇಷ್ಮಾ, ಜಿ.ಪಂ.ಉಪಕಾರ್ಯದರ್ಶಿ ಆನಂದ್ ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top