ದಾವಣಗೆರೆ: ಬ್ಯಾಂಕ್ ನೌಕರರ ದಶಕಗಳ ಬೇಡಿಕೆಯಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸಿ ಯುಎಫ್‌ಬಿಯು – ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯು ನೀಡಿದ ಕರೆಯ ಮೇರೆಗೆ ಅಖಿಲ ಭಾರತ ಬ್ಯಾಂಕ್ ಮುಷ್ಕರ ಯಶಸ್ವಿಯಾಗಿ ನಡೆಯಿತು ಎಂದು ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಮತ್ತು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.
ಮುಷ್ಕರದ ಅಂಗವಾಗಿ ಇಂದು ದಾವಣಗೆರೆಯ ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಡಿಪೇಟೆ ಶಾಖೆಯ ಮುಂದೆ ಜಮಾಯಿಸಿ ಕೇಂದ್ರ ಸರಕಾರ ಮತ್ತು ಹಣಕಾಸು ಇಲಾಖೆಯ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಕೆ.ರಾಘವೇಂದ್ರ ನಾಯರಿ ಮಾತನಾಡಿ ಬ್ಯಾಂಕ್ ಉದ್ಯೋಗಿಗಳ 5 ದಿನಗಳ ಬ್ಯಾಂಕಿಂಗ್ ಪದ್ಧತಿ ಬೇಡಿಕೆಯ ಬಗ್ಗೆ ಕಳೆದೊಂದು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಗಳ ನಡುವೆ ದಿನಾಂಕ 08.03.2024 ರಂದು ಒಪ್ಪಂದವಾಗಿದೆ. ಆದರೆ 2 ವರ್ಷಗಳೇ ಕಳೆದರೂ ಬೇಡಿಕೆ ಇನ್ನೂ ಈಡೇರಿಲ್ಲ. ಬ್ಯಾಂಕ್ ಉದ್ಯೋಗಿಗಳ ಸಹನೆಯ ಕಟ್ಟೆ ಒಡೆದು ಮುಷ್ಕರದ ಹಾದಿ ಅನಿವಾರ್ಯವಾಗಿದೆ ಎಂದರು.
ದಾವಣಗೆರೆ: ಮದುವೆಯಾಗಿ ಎರಡೇ ತಿಂಗಳಿಗೆ ಓಡಿಹೋದ ಪತ್ನಿ; ಮನನೊಂದು ಪತಿ, ಯುವತಿಯ ಸೋದರ ಮಾವ ಆತ್ಮ*ಹತ್ಯೆ
ಪ್ರಸ್ತುತ ಬ್ಯಾಂಕ್ ಉದ್ಯೋಗಿಗಳು ಅತೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವ್ಯವಹಾರಕ್ಕೆ ತಕ್ಕನಾಗಿ ಉದ್ಯೋಗಿಗಳ ನೇಮಕಾತಿ ಆಗುತ್ತಿಲ್ಲ. ವಾರದ ದಿನಗಳಲ್ಲಿ ನೌಕರರು ರಾತ್ರಿ ಹತ್ತಾದರೂ ಮನೆಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬಂದರೆ ನೌಕರರ ಕಾರ್ಯಕ್ಷಮತೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಇದಲ್ಲದೇ ಕೇಂದ್ರ ಸರಕಾರದ ಅಧೀನದಲ್ಲಿ ಇರುವ ಹಲವಾರು ಇಲಾಖೆಗಳು, ಜೀವ ವಿಮೆ, ಸಾಮಾನ್ಯ ವಿಮೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಬಿ, ನಬಾರ್ಡ್ ಮೊದಲಾದ ಇಲಾಖೆಗಳು ವಾರಕ್ಕೆ ಐದು ದಿನ ಮಾತ್ರವೇ ಕೆಲಸ ಮಾಡುತ್ತಿವೆ. ಜಾಗತಿಕ ಮಟ್ಟದಲ್ಲೂ ಅಮೇರಿಕಾ, ಇಂಗ್ಲೆಂಡ್, ಕೆನಡಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ರಷ್ಯಾ, ಬ್ರೆಜಿಲ್, ಸೌತ್ ಆಫ್ರಿಕಾ, ಮಲೇಷ್ಯಾ, ಇಂಡೋನೇಷ್ಯಾ ಮತ್ತಿತರ ಅನೇಕ ರಾಷ್ಟ್ರಗಳಲ್ಲಿ 5 ದಿವಸದ ಬ್ಯಾಂಕಿಂಗ್ ಪದ್ಧತಿಯೇ ಜಾರಿಯಲ್ಲಿದೆ.
ರಾಜ್ಯದ 6 ಸಾವಿರ ಗ್ರಾಮ ಪಂಚಾಯತಿಗಳಿಗೆ ಮಹಾತ್ಮಾಗಾಂಧಿ ಹೆಸರಿಡಲು ನಿರ್ಧಾರ; ಸಿಎಂ ಸಿದ್ದರಾಮಯ್ಯ
ಕೇಂದ್ರ ಹಣಕಾಸು ಇಲಾಖೆ ಅನಗತ್ಯವಾಗಿ ಕಾಲಹರಣ ಮಾಡಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸೋತಿದೆ. ಆದ್ದರಿಂದ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ಅನಿವಾರ್ಯವಾಗಿದೆ. ಇಂದಿನ ಮುಷ್ಕರದಲ್ಲಿ ಸುಮಾರು 8 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡು, ಬೀದಿಗಿಳಿದು ಸರಕಾರದ ವಿಳಂಬ ಧೋರಣೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ನಾಯರಿ ಹೇಳಿದರು.
ಜನವರಿ 24, 25 ಮತ್ತು 26 ರಂದು ಬ್ಯಾಂಕ್ ರಜೆ ಇರುವುದರಿಂದ 27 ರ ಬ್ಯಾಂಕ್ ಮುಷ್ಕರವು ಖಂಡಿತವಾಗಿ ಸಾರ್ವಜನಿಕರಿಗೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದರೆ ಈ ಸಮಸ್ಯೆಗೆ ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ, ಕೇಂದ್ರ ಹಣಕಾಸು ಸೇವೆಗಳ ಇಲಾಖೆಯೇ ನೇರವಾಗಿ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.
ಮುಷ್ಕರದ ನೇತೃತ್ವವನ್ನು ಜಿಲ್ಲಾ ಸಂಚಾಲಕ ಕೆ.ರಾಘವೇಂದ್ರ ನಾಯರಿ, ಕೆ.ವಿಶ್ವನಾಥ್ ಬಿಲ್ಲವ, ಹೆಚ್.ಎಸ್.ತಿಪ್ಪೇಸ್ವಾಮಿ, ಪ್ರದೀಪ್ ಪಾಟೀಲ್, ಸುನಿಲ್ ಮ್ಯಾಗೇರಿ, ಸಿದ್ಧಾರ್ಥ್ ಸಿಂಗ್, ಎಮ್.ಪಿ.ಕಿರಣಕುಮಾರ್, ಕೆ.ವಿಜಯಕುಮಾರ್, ದುರ್ಗಪ್ಪ ಸಿ, ವಿಶ್ವಚೇತನ್, ಅನುರಾಧಾ ಮುತಾಲಿಕ್, ದೀಪಾ ಗುಡಿ, ಶಮಂತ್ ಎಮ್, ಬಸವರಾಜ್ ಜಿ.ಟಿ, ರಶ್ಮಿ ಎಸ್, ಮಧುಸ್ವಿನಿ ದೇಸಾಯಿ, ಪ್ರಶಾಂತ್ ಎಸ್, ಅನಿಲ್ ಕುಮಾರ್, ಗ್ರಾಮೀಣ ಬ್ಯಾಂಕಿನ ನಾಗರಾಜ್ ನಾಶಿ, ಮಹಮದ್ ರಫಿ, ಸಿದ್ಧಾರ್ಥ್ ಪಿ.ಎನ್, ಶ್ರೀಹರ್ಷ ಹಾಗೂ ಮೂರ್ತಿ ನಾಯ್ಕ್, ಎಂ.ಎಂ.ಸಿದ್ದಲಿಂಗಯ್ಯ, ಎಂ.ಡಿ.ವಿದ್ಯಾಸಾಗರ್, ಅಣ್ಣಪ್ಪ ನಂದಾ, ಕೆ.ಜಯಲಕ್ಷ್ಮಿ, ಆಕನೂರು ತಿಪ್ಪೇಸ್ವಾಮಿ, ಸೈಯದ್ ಚಾಂದಬಾಷಾ, ಶಕ್ತಿಪ್ರಸಾದ್ ಜಿ.ಟಿ, ಆರ್.ಮಂಜಪ್ಪ, ಆಶಾ ಹೆಚ್.ಜೆ, ಮತ್ತಿತರರು ಉಪಸ್ಥಿತರಿದ್ದರು.



