Connect with us

Dvgsuddi Kannada | online news portal | Kannada news online

ದಾವಣಗೆರೆ: ಕೈಗಾರಿಕೆಗಳಿಗಿಂತಲೂ ವಾಹನಗಳಿಂದಾಗುವ ಮಾಲಿನ್ಯವೇ ಹೆಚ್ಚು

ದಾವಣಗೆರೆ

ದಾವಣಗೆರೆ: ಕೈಗಾರಿಕೆಗಳಿಗಿಂತಲೂ ವಾಹನಗಳಿಂದಾಗುವ ಮಾಲಿನ್ಯವೇ ಹೆಚ್ಚು

ಡಿವಿಜಿ ಸುದ್ದಿ, ದಾವಣಗೆರೆ: ದೇಶದಲ್ಲಿ ಕೈಗಾರಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯ ಪ್ರಮಾಣಕ್ಕಿಂತಲೂ ವಾಹನಗಳು ಹೊರಸೂಸುವ ವಿಷಾನಿಲದಿಂದಲೇ ಹೆಚ್ಚು ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಕೊಟ್ರೇಶ್  ಅಭಿಪ್ರಾಯಪಟ್ಟರು.

ಸಾರಿಗೆ ಇಲಾಖೆ ವತಿಯಿಂದ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯದ ಶೇ. 65 ರಷ್ಟು ವಾಹನಗಳಿಂದಲೇ ಆಗುತ್ತಿದೆ.  ಕೈಗಾರಿಕೆಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಪ್ರಮಾಣಕ್ಕಿಂತಲೂ ವಾಹನಗಳಿಂದ ಆಗುತ್ತಿರುವ ಮಾಲಿನ್ಯ ಹೆಚ್ಚಿನ ಪ್ರಮಾಣದ್ದಾಗಿದೆ. ವಾಹನಗಳನ್ನು ಖರೀದಿಸುವವರು, ಕಾಲ ಕಾಲಕ್ಕೆ ಆಯಿಲ್ ಬದಲಾವಣೆ, ಸರ್ವೀಸಿಂಗ್ ಮಾಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ ಅಂತಹ ವಾಹನಗಳಿಂದ ಹೆಚ್ಚು ಹೊಗೆ ಹೊರಸೂಸಿ ಪರಿಸರ ಮಾಲಿನ್ಯವಾಗುತ್ತಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ, ಸಾರ್ವಜನಿಕರಿಂದ ಇನ್ನೂ ಪ್ಲಾಸ್ಟಿಕ್ ವಸ್ತು ಹಾಗೂ ಸಾಮಗ್ರಿಗಳ ಬಳಕೆ ನಿಂತಿಲ್ಲ. ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನರಿತು ನಡೆದುಕೊಳ್ಳದೇ ಹೋದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವುದು ಕಷ್ಟಕರ ಎಂದು ಕೊಟ್ರೇಶ್ ಆತಂಕ ವ್ಯಕ್ತಪಡಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ ಮಾತನಾಡಿ, ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಮಾಲಿನ್ಯ ನಿಯಂತ್ರಣ ಮಾಸಾಚರಣೆ ಆಚರಿಸಲಾಗುತ್ತಿದೆ. ಈ ವರ್ಷ ಮಾಲಿನ್ಯದಿಂದ ಮರಣ, ಮಾಡೋಣ ನಿಯಂತ್ರಣ ಎಂಬ ಘೋಷಾವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ದೇಶದ ಆರ್ಥಿಕತೆ ಸಾರಿಗೆ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಸಾರಿಗೆ ವ್ಯವಸ್ಥೆ ಸದೃಢವಾಗಿದ್ದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಕೋವಿಡ್ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡಿದ ಕಾರಣದಿಂದಾಗಿ ಸಮೂಹ ಸಾರಿಗೆ ವ್ಯವಸ್ಥೆ ಕುಸಿದಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಸಮೂಹ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಎಂದರು.

ಕೊರೋನಾ ಕಾರಣದಿಂದಾಗಿ ಕಳೆದ ವರ್ಷಕ್ಕಿಂತಲೂ ಈ ವರ್ಷ ವಾಹನಗಳ ನೊಂದಣಿ ಹೆಚ್ಚಾಗಿದೆ. ಹೀಗಾಗಿ ವೈಯಕ್ತಿಕ ವಾಹನಗಳ ಓಡಾಟ ಹೆಚ್ಚಿರುವ ಕಾರಣದಿಂದ ವಾಯುಮಾಲಿನ್ಯವೂ ಹೆಚ್ಚಾಗಿದ್ದು, ಸಮಾಜದಲ್ಲಿ ಕಾಲ್ನಡಿಗೆ, ಸೈಕಲ್ ಬಳಕೆಗೆ ಉತ್ತೇಜನ ನೀಡುವಂತಾಗಬೇಕು. ಪ್ರತಿಯೊಬ್ಬರೂ ತಮ್ಮ ವಾಹನಗಳನ್ನು ಕಾಲಕಾಲಕ್ಕೆ ಸರ್ವೀಸಿಂಗ್ ಮಾಡಿಸಿಕೊಂಡು, ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಾಹನದ ಎಮಿಷನ್ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿದ್ದು, ಇದರ ದಾಖಲೆಯನ್ನು ತಪ್ಪದೆ ಇಟ್ಟುಕೊಳ್ಳಬೇಕು, ತಪ್ಪಿದಲ್ಲಿ 1000 ರೂ. ದಂಡ ತೆರಬೇಕಾಗುತ್ತದೆ ಎಂದರು.

ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಹೆಚ್ಚಿನ ಹಾನಿಯಾಗುತ್ತಿದ್ದು, ಇದರ ತಯಾರಿಕೆಯನ್ನು ಸರ್ಕಾರ ನಿಷೇಧಿಸಬೇಕು. ಪರಿಸರ ಮಾಲಿನ್ಯ ತಡೆಗಟ್ಟಲೆಂದೇ ಸರ್ಕಾರ ಇಂಧನ ಹಾಗೂ ವಾಹನದ ಇಂಜಿನ್ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಂಡಿದ್ದು, ಇದೀಗ ಪರಿಸರ ಮಾಲಿನ್ಯ ಕಡಿಮೆಗೊಳಿಸುವ ಬಿಎಸ್-6 ಮಾದರಿಯ ವಾಹನಗಳ ತಯಾರಿಕೆಯಾಗುತ್ತಿದೆ. ಸರಕು ಸಾಗಾಣಿಕೆ ವಾಹನಗಳು ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ಭಾರ ಹೊತ್ತು ಸಂಚರಿಸಿದರೆ, ವಾಹನದ ಇಂಜಿನ್ ಮೇಲೆ ಹೆಚ್ಚಿನ ಒತ್ತಡವುಂಟಾಗಿ ವಾಹನ ಹೆಚ್ಚು ಹೆಚ್ಚು ಹೊಗೆ ಹೊರಸೂಸುತ್ತದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಅಧಿಕಾರಿಗಳು ಇದನ್ನು ತಡೆಗಟ್ಟಬೇಕು. ಕೋವಿಡ್ ತಡೆಗೆ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಾಸ್ಕ್ ಬಳಕೆಯಿಂದ ಶ್ವಾಸಕೋಶದ ತೊಂದರೆ ಕಡಿಮೆಯಾಗಿದೆ. ಕೋವಿಡ್ ಇರಲಿ, ಇಲ್ಲದಿರಲಿ ಎಲ್ಲರೂ ಮಾಸ್ಕ್ ಧರಿಸುವುದನ್ನು ಮುಂದುವರೆಸಿದಲ್ಲಿ ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಪ್ರಮುದೇಶ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್ ಬಿ.ವಿ., ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಶಶಿಧರ್, ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿರುವ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯ ಅಂಗವಾಗಿ ಪ್ರತಿನಿತ್ಯ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದ್ದು, ನ. 30 ಕ್ಕೆ ಮಾಸಾಚರಣೆಯ ಸಮಾರೋಪ ನಡೆಯಲಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top