ಚನ್ನಗಿರಿ: ರೈತ ವಿರೋಧಿ ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಒಂದು ವರ್ಷದಿಂದ ನಿರಂತರವಾಗಿ ಚಳಿ, ಮಳೆ, ಬಿಸಿಲು ನಡುವೆ ಪೋಲಿಸರ ದೌರ್ಜನ್ಯ ಲೆಕ್ಕಿಸದೆ ರೈತರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು.
ತಾಲ್ಲೂಕಿನ ಹಿರೇಕೋಗಲೂರಲ್ಲಿ ಮಾತನಾಡಿದ ಅವರು ಕರಾಳ ಕೃಷಿ ಕಾಯ್ದೆಗಳನ್ನ ಕೇಂದ್ರ ಸರ್ಕಾರ ಹಿಂಪಡೆದಿದ್ದು ತಡವಾದರೂ ಬಿಜೆಪಿಗೆ ಬುದ್ದಿ ಬಂದಿದೆ ಎಂದರು. ದೇಶದಲ್ಲಿ ಶೇ. 70 ರಷ್ಟು ಕೃಷಿಯನ್ನೇ ನಂಬಿ ರೈತರು ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರನ್ನ ಲೆಕ್ಕಿಸದೇ ಮಾರಾಕ ಕೃಷಿ ಕಾಯ್ದೆಗಳನ್ನ ಜಾರಿಗೆ ತಂದಿದೆ. ಸರ್ವಾಧಿಕಾರಣೆ ಧೋರಣೆಯಂತೆ ಪ್ರತಿಪಕ್ಷ ಹಾಗೂ ರೈತರೊಂದಿಗೆ ಚರ್ಚೆ ನಡೆಸದೇ ಕಾಯ್ದೆಗಳನ್ನ ಜಾರಿಗೊಳಿಸಿತ್ತು. ರೈತರ ಹೋರಾಟಕ್ಕೆ ಬೆಂಬಲಿಸಿ ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಹಲವು ಬಾರಿ ಉಗ್ರ ಹೋರಾಟ ನಡೆಸಿತ್ತು. ಸ್ವಾತ್ರಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ದೇಶದಾದ್ಯಂತ ನಡೆದ ಹೋರಾಟಕ್ಕೆ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ ಹೋರಾಟ ಮಾಡುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.
ಈ ಹೋರಾಟದಲ್ಲಿ
ಸಾಕಷ್ಟು ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಈ ಜಯವನ್ನ ಬಲಿದಾನದ ರೈತರಿಗೆ ಅರ್ಪಿಸುತ್ತೇವೆ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು. ಬಂಡವಾಳ ಶಾಹಿಗಳ ಗುಲಾಮನಂತೆ ವರ್ತಿಸಿದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ರೈತರ ಹೋರಾಟದ ಬಿಸಿ ತಟ್ಟಿದೆ, ರೈತರನ್ನ ವಿರೋಧ ಮಾಡಿದರೆ ಪರಿಣಾಮ ಹೇಗಿರುತ್ತದೆ ಎಂಬುದನ್ನ ಅನ್ನದಾತರು ಹೋರಾಟದ ಮೂಲಕ ತಿಳಿಸಿಕೊಟ್ಟಿದ್ದಾರೆ. ಮುಂದಿನ ಆಡಳಿತಾವಧಿಯಲ್ಲಾದರೂ ಮೋದಿಯವರು ರೈತರ ಪರವಾಗಿ ಕೆಲಸ ಮಾಡಲಿ ಎಂದರು. ಸರ್ಕಾರ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳ ಹಿಂಪಡೆಯುವ ಮೂಲಕ ರೈತರ ಮುಂದೆ ಮಂಡಿಯೂರಿದೆ ಇದು ಬರೀ ರೈತರ ಗೆಲುವಲ್ಲ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಪ್ರಗತಿ ಪರ ಸಂಘಟನೆಗಳು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರೀಕರ ಗೆಲುವಾಗಿದೆ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು.



