ದಾವಣಗೆರೆ: ಕಳೆದ ವರ್ಷ ಮಳೆಯ ಅಭಾವದಿಂದ ಮುಂಗಾರು ಮತ್ತು ಹಿಂಗಾರಿನ ಭತ್ತದ ಬೆಳೆಗಳಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದೇವೆ. ಈ ನಿಟ್ಟಿನಲ್ಲಿ ರೈತ ಬಾಂಧವರು ಕಡಿಮೆ ನೀರು ಬಳಕೆ ಮಾಡಿಕೊಂಡು ಭತ್ತ ಬೆಳೆಯಲು ಮುಂದಾಗಬೇಕು ಎಂದು ಬೇಸಾಯ ತಜ್ಞ ಬಿ.ಓ . ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಭತ್ತದ ಬೆಳೆಯ ಬಗ್ಗೆ ಆಯೋಜಿಸಿದ್ದ ತರಬೇತಿಯಲ್ಲಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಅನೇಕ ಗ್ರಾಮಗಳಲ್ಲಿ ನೇರ ಭತ್ತ ಬಿತ್ತನೆ ತಂತ್ರಜ್ಞಾನವನ್ನು ರೈತರಿಗೆ ಪರಿಚಯ ಮಾಡಿಕೊಟ್ಟಿದ್ದೇವೆ, ಒಂದು ಎಕರೆ ಪ್ರದೇಶಕ್ಕೆ ಎಂಟರಿಂದ 10 ಕೆಜಿ ಬಿತ್ತನೆ ಬೀಜ ಬೇಕಾಗುತ್ತದೆ, ಜೊತೆಗೆ ಸಮಗ್ರ ಕಳೆ ಮತ್ತು ಕೀಟ ರೋಗಗಳ ನಿರ್ವಹಣೆ ಕೈಗೊಂಡರೆ ಈ ಪದ್ಧತಿಯಲ್ಲಿ ಸಾಮಾನ್ಯ ಪದ್ಧತಿಗಿಂತ ಇಳುವರಿನ್ನು ಹೆಚ್ಚು ಪಡೆಯಬಹುದು ಹಾಗೂ ಶೇಕಡ 40ರಷ್ಟು ನೀರಿನ ಉಳಿತಾಯವನ್ನು ಮಾಡಬಹುದು ಎಂದರು.
ಮಣ್ಣು ವಿಜ್ಞಾನಿ ಎಚ್ಎಂ ಸಣ್ಣ ಗೌಡರ, ರೈತರಿಗೆ ಮಣ್ಣು ಮಾದರಿ ತೆಗೆಯುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಸ್ತರಣ ತಜ್ಞರಾದ ರಘುರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒ ಸದಸ್ಯರು , ಕೃಷಿ ಮತ್ತು ಪಶು ಸಕಿ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.



