ದಾವಣಗೆರೆ; ಈ ವರ್ಷ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸುವುದರಿಂದ, ಸಿರಿಧಾನ್ಯ ಬೆಳೆಯುವ ಪ್ರತಿಯೊಬ್ಬ ರೈತರಿಗೂ ಸರ್ಕಾರದ ಸಹಾಯಧನ ಪ್ರತಿ ಎಕರೆಗೆ 4 ಸಾವಿರ ರೂ.ಗಳಂತೆ ಕೊಡಲು ತೀರ್ಮಾನಿಸಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.
ಕೃಷಿ ಇಲಾಖೆ ಹಾಗೂ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸಾವಯವ ಸಿರಿ ಯೋಜನೆಯಡಿಯಲ್ಲಿ ಸಿರಿಧಾನ್ಯ ಊದಲು ಬೆಳೆಯ ಕ್ಷೇತ್ರೋತ್ಸವ ವನ್ನು ದಾವಣಗೆರೆ ತಾಲ್ಲೂಕು ತುಂಬಿಗೆರೆ ಗ್ರಾಮದ ಶ್ರೀ ನಾಗರಾಜಪ್ಪ ಇವರ ತಾಕಿನಲ್ಲಿ ಆಚರಿಸಲಾಯಿತು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ ಮಾತನಾಡಿ, ಸಿರಿಧಾನ್ಯಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಬೇಕು. ಮುಂದಿನ ಹಂಗಾಮಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯುವಾಗ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಯಾಂತ್ರಿಕೃತ ಕಟಾವು ಯಂತ್ರಗಳು ಲಭ್ಯವಿರುವುದರಿಂದ ಕಟಾವು ಸಮಯದಲ್ಲಿ ಕೂಲಿ ಆಳುಗಳ ಸಮಸ್ಯೆಗೆ ಇದೊಂದು ಪರಿಹಾರ ಎಂದರು.
ನೇಗಿಲ ಸಿರಿ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀ ರಾಘವೇಂದ್ರ ಅವರು ಮಾತನಾಡುತ್ತಾ ಸಿರಿಧಾನ್ಯಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಆಲೂರಿನಲ್ಲಿರುವ ರೈತ ಉತ್ಪಾದಕ ಕಂಪನಿ, ಸಿರಿಧಾನ್ಯಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮದ ಪ್ರಗತಿಪರ ಕೃಷಿಕರು ಹಾಗೂ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಅವಿನಾಶ್ ಟಿ.ಜಿ. ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.



