ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಅತಿವೃಷ್ಠಿಯಿಂದ ಸುಮಾರು 85 ಹೆ. ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದ್ದು, ರೈತರು ತೀರ್ವ ಸಂಕಷ್ಟದಲ್ಲಿದ್ದಾರೆ. ಆದರೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪ್ರಾತ್ಯಕ್ಷಿಕೆ ನೀಡಿದ ‘ಭೀಮಾ ಸೂಪರ್’ ತಳಿ ಅತೀ ಮಳೆಯಲ್ಲಿಯೂ ಉತ್ತಮ ಬೆಳವಣಿಗೆ ಹಾಗೂ ಗಡ್ಡೆ ಕಟ್ಟಿದೆ ಎಂದು ತೋಟಗಾರಿಕೆ ತಜ್ಞರಾದ ಶ್ರೀ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಬಿದರಕೆರೆ ತರಳಬಾಳು ರೈತ ಉತ್ಪಾದಕ ಕಂಪನಿ, ತೋಟಗಾರಿಕೆ ಇಲಾಖೆ, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದವತಿಯಿಂದ ಜಗಳೂರು ತಾಲ್ಲೂಕು ಅರಶಿನಗುಂಡಿ ಗ್ರಾಮದಲ್ಲಿ ಪ್ರಧಾನ ರೈತರ ತರಬೇತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಂತ್ರಜ್ಞಾನಗಳಾದ ಟ್ರೈಕೋಡರ್ಮಾ ಬೀಜೋತ್ಪಾದನೆ, ಲಘು ಪೋಷಕಾಂಶಗಳ ಬಳಕೆ, ಜೈವಿಕ ಕೀಟನಾಶಕಗಳ ಬಳಕೆ, ಮೋಹಕ ಬಲೆಗಳ ಬಳಕೆ ಮುಂತಾದವುಗಳನ್ನು ರೈತರು ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಅಳವಡಿಸಿಕೊಂಡಿರುವುದರ ಪ್ರತಿಫಲವಿದು ಎಂದು ತಿಳಿಸಿದರು.
ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ದೇವರಾಜ ಟಿ.ಎನ್. ರವರು ಮಾತನಾಡಿ, ತಂತ್ರಜ್ಞಾನಕ್ಕೆ ಬೆಲೆ ಬರುವುದು ಅಳವವಡಿಸಿಕೊಂಡಾಗ ಮಾತ್ರ. ಪ್ರಸ್ತುತ ಬೆಳೆದಿರುವ ಈರುಳ್ಳಿ ತಳಿ ಸುಮಾರು ೧೮-೨೦ ಟನ್ ಹೆಕ್ಟೇರಿಗೆ ನಿರೀಕ್ಷೆಯಿದ್ದು ರೈತರಿಗೆ ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದರು. ಬೆಳೆ ಪರಿವರ್ತನೆ, ಮಿಶ್ರ ಬೆಳೆ ಪದ್ಧತಿ, ಅಂತರ ಬೆಳೆ, ಸಮಗ್ರ ಕೃಷಿ ಪದ್ಧತಿಗಳು ಮುಂದೆ ಕೃಷಿ ಸುಸ್ಥಿರವಾಗಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಅರುಣ್‌ಕುಮಾರ್ ಹೆಚ್. ಸಿ. ಮಾತನಾಡಿ ಇಲಾಖೆವತಿಯಿಂದ ಈರುಳ್ಳಿ ಬೆಳೆ ಶೇಖರಣಾ ಘಟಕಗಳಿಗೆ ಅನುದಾನ ಲಭ್ಯವಿದ್ದು ಶೇಕಡಾ 50 ರಷ್ಟು ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದರು. ವೈಜ್ಞಾನಿಕ ತಂತ್ರಜ್ಞಾನದ ಬಳಕೆಯಿಂದ ಬೆಳೆ ಸಮೃದ್ಧಿಯಾಗಿ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರಾದ ಶ್ರೀ ಸೋಮನಗೌಡ ಕಟ್ಟಿಗೆಹಳ್ಳಿ, ನಾಗರಾಜ ಅರಿಶಿನಗುಂಡಿ, ಸಿದ್ದೇಶ್ ರವರು ಬೆಲೆಯಲ್ಲಿನ ತವ್ಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಮಲ್ಲಿಕಾರ್ಜುನ ಬಿ.ಓ, ಡಾ ಸುಪ್ರಿಯಾ ಪಿ. ಪಾಟೀಲ್, ಪವನ್ ಪಾಟೀಲ್, ರೈತ ಉತ್ಪಾದಕ ಕಂಪನಿಯ ಸದಸ್ಯರುಗಳು, ಅಧಿಕಾರಿಗಳು ಮತ್ತು ಸುತ್ತ ಮುತ್ತಲಿನ 80 ಕ್ಕೂ ಹೆಚ್ಚು ರೈತರು ಹಾಜರಿದ್ದರು.



