ದಾವಣಗೆರೆ: ಬೈಕ್ ಸವಾರನೊಬ್ಬ ಪಾದಚಾರಿಗೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಪಾದಚಾರಿ ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು (ಮಾ. 26) ನಡೆದಿದೆ.
ಈ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ಚೀಳಂಗಿ ಗ್ರಾಮದ ಶ್ರೀಧರ್ (30) ಮೃತಪಟ್ಟ ಬೈಕ್ ಸವಾರನಾಗಿದ್ದು, ಚಿಕ್ಕಬೆನ್ನೂರು ಗ್ರಾಮದ ರಸ್ತೆಯಲ್ಲಿ ನಡೆದಕೊಂಡು ಹೋಗುತ್ತಿದ್ದ ಶಿವಣ್ಣ (70) ಮೃತಪಟ್ಟವರು.
ಚೀಳಂಗಿ ಗ್ರಾಮದ ಶ್ರೀಧರ್ ಮೇಗಳಹಳ್ಳಿ ಗ್ರಾಮದ ವೇದಾಂತ ಮೈನ್ಸ್ ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇಂದು (ಮಾ.26) ಬೆಳಗ್ಗೆ 5 ಗಂಟೆಗೆ ಎಂದಿನಂತೆ ಮೈನ್ಸ್ ಕೆಲಸಕ್ಕೆ ತೆರಳಲು ಚೀಳಂಗಿ ಗ್ರಾಮದಿಂದ ಚಿಕ್ಕಬೆನ್ನೂರು ಗ್ರಾಮದ ಬಲ ಬದಿ ಸರ್ವಿಸ್ ರಸ್ತೆ ಮೂಲಕ ಸಿರಿಗೆರೆ ಸರ್ಕಲ್ ಕಡೆ ತೆರಳುವ ಮಾರ್ಗ ಮಧ್ಯೆ ಚಿಕ್ಕಬೆನ್ನೂರು ಗ್ರಾಮದ ಶಿವಣ್ಣ ಎಂಬವರು ಸರ್ವಿಸ್ ರಸ್ತೆಯಲ್ಲಿ ಅಡ್ಡ ಬಂದಾಗ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



