ದಾವಣಗೆರೆ: ಜಾತ್ರೆ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ ಲಾರಿ-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮೂವರು ಯುವಕರು ಸಾವನ್ನಪ್ಪಿದ ಘಟನೆ ನಡೆದಿದೆ.
ದಾವಣಗೆರೆ ತಾಲ್ಲೂಕಿನ ಆನಗೋಡು ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿದ ಯುವಕರು ದಾವಣಗೆರೆಯ ರಾಮನಗರ ನಿವಾಸಿಗಳಾಗಿದ್ದಾರೆ. ಮೃತರನ್ನು ಪರಶುರಾಮ, ಶಿವು, ಸಂದೇಶ ಎಂದು ಗುರುತಿಸಲಾಗಿದೆ. ಕಾಟಿಹಳ್ಳಿ ಜಾತ್ರೆ ಮುಗಿಸಿಕೊಂಡು ಒಂದೇ ಬೈಕ್ ನಲ್ಲಿ ಅತಿ ವೇಗವಾಗಿ ದಾವಣಗೆರೆ ಕಡೆ ಪ್ರಯಾಣಿಸುತ್ತಿದ್ದಾಗ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಲಾರಿ ಗುದ್ದಿದ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.



