ದಾವಣಗೆರೆ: ಮಾಸ್ ಲೀಡರ್ ಬಿ.ಎಸ್. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ, ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದೇ ಬಿಜೆಪಿ ಹೀನಾಯ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ವರ್ಗದವರು ನಮ್ಮ ಪಕ್ಷದ ಬಗ್ಗೆ ಬೇಸರಗೊಂಡಿದ್ದರು. ಬಿಎಸ್‌ವೈ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದ್ದು,ಅವರ ಕಣ್ಣೀರಿನಲ್ಲಿ ಪಕ್ಷ ಕೊಚ್ಚಿ ಹೋಗಲಿದೆ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದರು. ಅದರಂತೆ ನಮ್ಮ ಪಕ್ಷ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು ಎಂದರು.
ಒಳಮೀಸಲಾತಿ ಜಾರಿಗೆ ತನ್ನಿ ಎಂದು ಯಾರೂ ಕೇಳಿರಲಿಲ್ಲ. ಮೀಸಲಾತಿ ವಿಚಾರಕ್ಕೆ ಈಗ ಕೈ ಹಾಕಬೇಡಿ ಎಂದರೂ ಕೇಳದೆ ಒಳಮೀಸಲಾತಿ ಜಾರಿಗೆ ತಂದರು. ಇದರ ಪರಿಣಾಮ ನಮ್ಮ ಸೋಲಿಗೆ ಕಾರಣವಾಯಿತು. ಸೋತು ಸುಣ್ಣವಾದರೂ ನಮ್ಮ ಪಕ್ಷದ ನಾಯಕರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಇನ್ನೂ ವಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ರಾಜ್ಯಾಧ್ಯಕ್ಷ ಕಟೀಲ್ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆಂದು ಹೇಳುತ್ತಾರೆ, ಮತ್ತೂಮ್ಮೆ ರಾಜೀನಾಮೆ ನೀಡಿಲ್ಲ ಎಂದು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.



