ದಾವಣಗೆರೆ; 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಆಗಲಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (ಯುಪಿಎ) ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಜೆಡಿಯು ರಾಜಾಧ್ಯಕ್ಷ ಮಹಿಮಾ ಜೆ.ಪಟೇಲ್ ಹೇಳಿದರು.
2024ರ ವೇಳೆಗೆ ಬಿಜೆಪಿ ಪಕ್ಷ ಹೊರತುಪಡಿಸಿ ಕಾಂಗ್ರೆಸ್ ಸೇರಿ ಉಳಿದ ಎಲ್ಲಾ ಪಕ್ಷಗಳು ಒಂದಾಗಲಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ನಾನು ಸಂಸತ್ ಚುನಾವಣೆಗೆ ಸ್ಪರ್ಧಿಸುತ್ತೇನೆ. ಬದಲಾದ ಸನ್ನಿವೇಶದಲ್ಲಿ ನಾನು ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದರು.
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಾನು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಆದರ, ರಾಜ್ಯದ ವಿಧಾನಸಭಾ ಕ್ಷೇತ್ರದ ಎಲ್ಲಾ 224 ಕ್ಷೇತ್ರಗಳಿಂದ ಸಂಯುಕ್ತ ಜನತಾ ದಳದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಈಗಾಗಲೇ ಜೆಡಿಯು ಪಕ್ಷದಿಂದ ಆಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸದ್ಯಕ್ಕೆ 3 ಜನ ಅಭ್ಯರ್ಥಿಗಳು ಆಯ್ಕೆ ಯಾಗಿದ್ದು ಉಳಿದ 50 ರಿಂದ 100 ಕಡೆಗಳಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಉಳಿದ ಕಡೆಗಳಲ್ಲಿಯೂ ಅಭ್ಯರ್ಥಿಗಳನ್ನು ಕೆಲವು ಮಾನದಂಡ ಆಧಾರದಲ್ಲಿ ಆಯ್ಕೆ ಮಾಡಲಾಗುವುದು ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳ ಹಿನ್ನೆಲೆ, ಜೀವನ ಶೈಲಿ, ಸಮಾಜ ಸೇವೆ, ಅಪರಾಧ ಹಿನ್ನೆಲೆ ಗುರುತಿಸಿ ಸಾವಯವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಸುಸ್ಥಿರ ಕರ್ನಾಟಕ ಬಳಗದ ವತಿಯಿಂದ ಫೆ.11 ಹಾಗೂ 12ರಂದು ಮೊದಲನೇ ಚಿಂತನ-ಮಂಥನ ಸಭೆಯನ್ನು ರಾಣೇಬೆನ್ನೂರು ತಾಲ್ಲೂಕು ಮುದೇನೂರಿನ ಪ್ರಗತಿಪರ ರೈತರಾದ ಶಂಕರಗೌಡ್ರ ತೋಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಎಲ್ಲಾ ರಂಗಗಳಲ್ಲೂ ಸಾವಯವ ಚಿಂತನೆ ತರುವ ಉದ್ದೇಶದಿಂದ ಚಿಂತನ ಮಂಥನ ಸಭೆ ನಡೆಸಲಾಗುವುದು. ಎಲ್ಲಾ ವಿಭಾಗದ ಸಾವಯವ ಚಿಂತಕರನ್ನು ಸೇರಿಸಿ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಚಿಂತನೆ ನಡೆಸಲಾಗುವುದು ಎಂದರು. ಶಂಕರಗೌಡ್ರು, ಮಾಹಿಮಾ ಜೆ. ಪಟೇಲ್, ರಾಘವ, ಬಾ. ಸಂಜೀವ್ ಕುಲಕರ್ಣಿ, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜಯರಾಂ, ಕೆ.ಟಿ. ಗಂಗಾಧರ್ ಇನ್ನಿತರರು ಉಪಸ್ಥಿತರಿರುವರು ಎಂದರು.



