ಜಗಳೂರು: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ( ದಿಶಾ) ಸದಸ್ಯರನ್ನಾಗಿ ತಾಲ್ಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಸ್ವಾತಿ ತಿಪ್ಪೇಸ್ವಾಮಿ ಸೇರಿದಂತೆ ನಾಲ್ವರು ಸರ್ಕಾರೇತರ ಸದಸ್ಯರನ್ನು ಜಿಲ್ಲೆಯಲ್ಲಿ ನೇಮಕ ಮಾಡಿ ಆದೇಶಿಸಲಾಗಿದೆ.
ದಾವಣಗೆರೆ ನಗರದ ಜಿ.ವಿ. ಗಂಗಾಧರ, ಗಂಗರಸನಕಟ್ಟೆ ಗ್ರಾಮದ ಜಿ.ಎನ್. ಸಂಗಪ್ಪ, ಹೊನ್ನಾಳಿಯ ಎನ್.ಎಸ್. ಮಂಜುನಾಥ್ ಸೇರಿ ನಾಲ್ವರನ್ನು ನೇಮಕ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶಿಸಿದೆ. ತಾಲ್ಲೂಕಿನ ಸೊಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು,ಸೊಕ್ಕೆ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ದಿಶಾ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಸ್ವಾತಿ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ,ದಿಶಾ ಸಮಿತಿಗೆ ನನ್ನ ಹೆಸರನ್ನು ಶಿಫಾರಸು ಮಾಡಿದ ಸಂಸದ ಜಿಎಂ ಸಿದ್ದೇಶ್ ಹಾಗೂ ಶಾಸಕರಾದ ರಾಮಚಂದ್ರಪ್ಪ ಅವರ ಸಹಕಾರದಿಂದ ಮತ್ತಷ್ಟು ಜನಪರ ಕೆಲಸಗಳನ್ನು ಮಾಡಲು ಸ್ಫೂರ್ತಿ ಸಿಕ್ಕಂತಾಗಿದೆ ಎಂದಿದ್ದಾರೆ.