ಡಿವಿಜಿ ಸುದ್ದಿ, ಬೆಳಗಾವಿ: ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಪತ್ನಿ ಕುಸುಮಾ ಅವರಿಗೆ ನೀಡುವಂತೆ ಶಾಸಕರು, ಮಾಜಿ ಸಂಸದರು ಸೇರಿ ಹಲವರು ಶಿಫಾರಸು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಸುಮಾ ತಂದೆ ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ಯಾವುದೋ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ. ನೊಂದ ಹೆಣ್ಮಗಳಿಗೆ ಟಿಕೆಟ್ ಕೊಡಲು ಪರಿಗಣಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಇನ್ನು ಚರ್ಚೆ ನಡೆದಿಲ್ಲ. ಆರ್ ಆರ್ ನಗರದಲ್ಲಿ ಏಳೆಂಟು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದರು.
ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆ ಟಿಕೆಟ್ ವಿಷಯದಲ್ಲಿ ಚರ್ಚಿಸಲು ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಅವರು ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಶಿಫಾರಸು ಮಾಡುತ್ತಾರೆ. ಅಭ್ಯರ್ಥಿ ಆಯ್ಕೆಗೆ ಸಿದ್ದರಾಮಯ್ಯ ಸೇರಿ ಮುಖಂಡೆರೆಲ್ಲರೂ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.



