ಡಿವಿಜಿ ಸುದ್ದಿ, ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ಶನಿವಾರವೇ ರಾಜೀನಾಮೆ ಸಲ್ಲಿಸಿದ್ದಾರೆ. ಸಿ.ಟಿ.ರವಿ ಅವರು ಗಾಂಧಿ ಜಯಂತಿಯಂದೇ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ ಗಾಂಧಿ ಜಯಂತಿಯಂದು ಸಿಎಂ ಯಡಿಯೂರಪ್ಪ ಸಿಗದ ಕಾರಣ ನಿನ್ನೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೂ ಸೋಮವಾರ ದೆಹಲಿಗೆ ಪ್ರಯಾಣ ಬೆಳಸಲಿದ್ದು, ಅಲ್ಲಿ ರಾಜೀನಾಮೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮಾಹಿತಿ ನೀಡಲಿದ್ದಾರೆ.
ಅಕ್ಟೋಬರ್ 5, 6ರಂದು ದೆಹಲಿಯಲ್ಲಿ ಪಕ್ಷದ ಸಂಘಟನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿ.ಟಿ.ರವಿ ಭಾಗವಹಿಸಲಿದ್ದಾರೆ. ಸಿ.ಟಿ ರವಿ ರಾಜೀನಾಮೆ ಸ್ವೀಕಾರ ಬಗ್ಗೆ ಸೋಮವಾರವೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
ಓರ್ವ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಪಕ್ಷದ ಹುದ್ದೆ ನೀಡಿದರೆ ಸಚಿವ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ. ಈ ಕಾರಣಕ್ಕೆ ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.