ಬೆಂಗಳೂರು: ಅಪಹರಣಕಾರರು ನನ್ನ ಕುತ್ತಿಗೆ ಮೇಲೆ ಗನ್ ಇಟ್ಟಿದ್ದರು. ಯಾರಿಗಾದರೂ ಮಾಹಿತಿ ನೀಡಿದ್ರೆ ಕೊಲೆ ಮಾಡುವುದಾಗಿ ಹೆದರಿಸಿ ಗನ್ ನನ್ನು ತಲೆಗೆ ಇಟ್ಟಿದ್ದರು. ಕುಟುಂಬದವರಿಗೂ ವಿಚಾರ ಮುಟ್ಟಿಸುವಂತಿರಲಿಲ್ಲ. ನಾಲ್ಕು ಗಂಟೆ ಕಾರಿನಲ್ಲೇ ಸುತ್ತಾಡಿಸಿ ಮೂವತ್ತು ಕೋಟಿ ಹಣಕ್ಕಾಗಿ ಚಿತ್ರ ಹಿಂಸೆ ನೀಡಿದ್ದರು ಎಂದ ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಅಪಹರಣಕ್ಕೆ ಒಳಗಾಗಿ ಪೊಲೀಸರಿಗೆ ದೂರು ನೀಡಿರುವ ಮಾಜಿ ಸಚಿವ ವರ್ತೂರು ಆರ್. ಪ್ರಕಾಶ್ ಅವರು, ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ನಿನ್ನೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದ ವರ್ತೂರು ಪ್ರಕಾಶ್ ಇವತ್ತು ಅಪಹರಣಕ್ಕೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡರು.
ಕೋಲಾರದಲ್ಲಿ ನಾಲ್ಕೈದು ಮದುವೆ ಇತ್ತು. ಹೀಗಾಗಿ ನಾನು ಕೋಲಾರದಲ್ಲಿರುವ ಫಾರ್ಮ್ ಹೌಸ್‌ಗೆ ಹೋಗಿದ್ದೆ. ಫಾರ್ಮ್ ಹೌಸ್ ನಿಂದ ನಾನು ವಾಫಸು ಹೋಗುವಾಗ ಎಂಟು ಜನ ಅಡ್ಡ ಹಾಕಿದರು. ಎಲ್ಲರೂ ಮಂಕಿ ಕ್ಯಾಪ್ ಹಾಕಿಕೊಂಡಿದ್ದರು. ನನ್ನ ಚಾಲಕನಿಗೆ ಮಚ್ಚಿನಲ್ಲಿ ಹೊಡೆದು ಹಲ್ಲೆ ನಡೆಸಿದರು. ಇದಾದ ಬಳಿಕ ನಾಲ್ಕು ಗಂಟೆ ಕಾರಿನಲ್ಲೇ ಸುತ್ತಾಡಿಸಿ ಅರಣ್ಯಕ್ಕೆ ಕರೆದುಕೊಂಡು ಹೋಗಿ ಸುಮಾರು ಹೊತ್ತು ಹಲ್ಲೆ ಮಾಡಿದರು. ಮೂವತ್ತು ಕೋಟಿ ನೀಡುವಂತೆ ಬೇಡಿಕೆ ಇಟ್ಟರು. ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡುವುದಾಗಿ ಹೆದರಿಸಿದರು.
ನನ್ನ ಚಾಲಕನಿಗೆ ಮಚ್ಚಿನಲ್ಲಿ ತಲೆಗೆ ಹೊಡೆದಿದ್ದರಿಂದ ಅವನಿಗೆ ತುಂಬಾ ಪೆಟ್ಟಾಯಿತು. ಆತ ಪೊದೆಯಲ್ಲಿ ಮುಚ್ಚಿಟ್ಟುಕೊಂಡು ಎಸ್ಕೇಪ್ ಆದ. ಇದಾದ ಬಳಿಕ ನನ್ನನ್ನು ಕೆ.ಆರ್. ಪುರಂ ಸತ್ಯ ಸಾಯಿ ಆಸ್ಪತ್ರೆ ಬಳಿ ಕರೆದೊಯ್ದು ಸುಮಾರು ಆರು ಗಂಟೆಗಳ ಕಾಲ ಹಲ್ಲೆ ನಡೆಸಿದರು. ಕೊನೆಯ ವರೆಗೂ ಅವರು ಮಂಕಿ ಕ್ಯಾಪ್ ತೆಗೆಯಲಿಲ್ಲ. ದುಡ್ಡು ತರಿಸಲು ಹೆದರಿಸಿ ಮೊಬೈಲ್ ನಲ್ಲಿ ಕರೆ ಮಾಡಲು ಅವಕಾಶ ನೀಡಿದರು.
ಬೇರೆ ಯಾರಿಗಾದರೂ ಮಾಹಿತಿ ನೀಡಿದ್ರೆ ಕೊಲೆ ಮಾಡುವುದಾಗಿ ಹೆದರಿಸಿ ಗನ್ ನನ್ನು ತಲೆಗೆ ಇಟ್ಟಿದ್ದರು. ಹೀಗಾಗಿ ಕೋಲಾರದ ನನ್ನ ಸ್ನೇಹಿತನಿಗೆ ಕರೆ ಮಾಡಿ, ಐವತ್ತು ಲಕ್ಷ ರೂಪಾಯಿ ತರಿಸಿ ಕೊಟ್ಟಿದ್ದೆ. ಕುಟುಂಬದವರಿಗೆ ಅನುಮಾನ ಬಾರದಂತೆ ಪೋನಿನಲ್ಲೇ ಮಾತನಾಡಿಸಿದ್ರು ಎಂದು ಅವರು ಹೇಳಿದರು.ನನಗೆ ಯಾವುದೇ ರೀತಿಯ ವ್ಯವಹಾರ ಇಲ್ಲ. ಒಂದು ರೂಪಾಯಿ ಕೂಡ ಸಾಲ ಇಲ್ಲ. ರಾಜಕೀಯ ದ್ವೇಷವೂ ಇಲ್ಲ. ಬೆಂಗಳೂರಿನ ಅಪಹರಣಕಾರರು ದುಡ್ಡಿಗಾಗಿ ಮಾಡಿದ್ದಾರೆ. ಕೊಲೆ ಮಾಡುವುದಾಗಿ ಹೆದರಿಸಿದ್ದರಿಂದ ನಾನು ಭಯಪಟ್ಟೆ. ಈ ಬಗ್ಗೆ ನಾನು ಸೋಮವಾರ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಬಳಿಕ ನಾನು ದೂರು ನೀಡಿದ್ದೇನೆ. ನನಗೆ ಪೊಲೀಸರ ಭದ್ರತೆ ಅಗತ್ಯವಿದ್ದು, ಗೃಹ ಸಚಿವರಿಗೆ ಮನವಿ ಮಾಡುತ್ತೇನೆ ಎಂದು ವರ್ತೂರು ಪ್ರಕಾಶ್ ಹೇಳಿದರು.
ವರ್ತೂರು ಪ್ರಕಾಶ್ ಕೋಲಾರಿನಲ್ಲಿ ಅಪರಹಣಕ್ಕೆ ಒಳಗಾದರೂ ಕೆಲವು ದಿನ ದೂರು ನೀಡಿಲ್ಲ. ದೂರು ನೀಡಿದರೆ ಮಕ್ಕಳನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದರಿಂದ ದೂರು ನೀಡಲು ತಡ ಮಾಡಿದ್ದಾಗಿ ವರ್ತೂರು ಪ್ರಕಾಶ್ ದೂರಿನಲ್ಲಿ ವಿವರಿಸಿದ್ದಾರೆ. ಹೊಸಕೋಟೆ ಬಳಿ ಅಪಹರಣಕಾರರು ವರ್ತೂರು ಪ್ರಕಾಶ್ ಅವರನ್ನು ಬಿಟ್ಟು ಕಳಿಸಿದ್ದು, ಲಾರಿ ಚಾಲಕರೊಬ್ಬರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾಗಿ ದೂರಿನಲ್ಲಿ ವಿವರಿಸಿದ್ದು, ದೂರಿನ ಆಧಾರದ ಮೇಲೆ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎರಡು ತಂಡ ರಚನೆ: ಇನ್ನು ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣ ತನಿಖೆ ನಡೆಸಲು ಎರಡು ವಿಶೇಷ ತಂಡ ರಚಿಸಲಾಗಿದೆ. ವರ್ತೂರು ಪ್ರಕಾಶ್ ಅವರ ಮೊಬೈಲ್ ಲೊಕೇಷನ್ ಜಾಡು ಹಿಡಿದು ಸಿಸಿಟಿವಿ ದೃಶ್ಯ ಸಂಗ್ರಹ ಕಾರ್ಯದಲ್ಲಿ ಪೊಲೀಸರ ತಂಡಗಳು ನಿರತವಾಗಿವೆ. ಡಿಸಿಪಿ ಡಿ. ದೇವರಾಜ್ ನೇತೃತ್ವದಲ್ಲಿ ಎರಡು ತಂಡ ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ.