ಕೊಪ್ಪಳ: ಮಿನಿ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಶುಕ್ರವಾರ ಕುಕನೂರು ತಾಲೂಕಿನ ನಿಟ್ಟಾಲಿ ಕ್ರಾಸ್ ಬಳಿ ನಡೆದಿದೆ.
ಕೊಪ್ಪಳ ತಾಲೂಕಿನ ಹಿರೇ ಸಿಂದೋಗಿ ಗ್ರಾಮದ ಕೊಳ್ಳಿ ಮನೆತನದಲ್ಲಿ ಹೋಳಿಗೆ ಊಟ ಆಯೋಜಿಸಲಾಗಿತ್ತು. ಇದಕ್ಕಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಿಂದ ಮಿನಿ ಬಸ್ ನಲ್ಲಿ ಜನರು ಆಗಮಿಸುತ್ತಿದ್ದರು. ನಿಟ್ಟಾಲಿ ಬಳಿ ಬೈಕ್ ಸವಾರ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ರಸ್ತೆ ಪಕ್ಕದ ತಗ್ಗಿಗೆ ನುಗ್ಗಿ ಮರಕ್ಕೆ ಗುದ್ದಿದೆ.
ಇದರಿಂದ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಬೈಕ್ ಸವಾರ ಕೂಡ ಸಾವನ್ನಪ್ಪಿದ್ದಾನೆ. ಮೃತರನ್ನು ರಂಗಪ್ಪ ನಾಗಣ್ಣವರ (80 ), ಭೀಮವ್ವ ಗೋಡಿ (70 ) ಮತ್ತು ಬೈಕ್ ಸವಾರ ಸಂತೋಷ್ (22 ) ಎಂದು ಗುರುತಿಸಲಾಗಿದೆ. ಆರು ಜನರು ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿಯು ಚಿಂತಾಜನಕವಾಗಿದೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



