ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷಕ್ಕೆ ಕೊರೊನಾ ಎರಡನೇ ಅಲೆ ಅಪ್ಪಳಿಸುವ ಆತಂಕ ಎದುರಾಗಿದ್ದು, ಈ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯೊಂದನ್ನು ನೀಡಿದೆ. ಈ ವರ್ಷ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
ಡಿಸೆಂಬರ್ 26ರಿಂದ ಜನವರಿ 1ರವರೆಗೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಹೊಸ ವರ್ಷದ ಸಂಭ್ರಮಾಚರಣೆ ಮಾಡದಂತೆ ನಿರ್ಬಂಧ ವಿಧಿಸುವಂತೆಯೂ ಸಲಹೆ ನೀಡಿದೆ. ಹೀಗಾಗಿ ಈ ಬಾರಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ರಾಜ್ಯ ಸರ್ಕಾರ ಬ್ರೇಕ್ ಹಾಕಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ.
2021ರ ಜನವರಿ, ಫೆಬ್ರವರಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಜನರ ಓಡಾಟ ಹೆಚ್ಚುವುದರಿಂದ ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಮತ್ತೆ ಏರಿಕೆಯಾಗಬಹುದು. ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಜಾರಿ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ನೈಟ್ ಕರ್ಫ್ಯೂ ಜಾರಿ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.



