ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ನಿರ್ಧಾರ ಜನರ ಕೈಯಲ್ಲಿದೆ. ಪರಿಸ್ಥಿತಿ ಕೈ ಮೀರಿದರೆ ಲಾಕ್ ಡೌನ್ ಹೇರಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಲಾಕ್‍ಡೌನ್ ಮಾಡುವುದಕ್ಕೆ ತೀರ್ಮಾನಿಸಿಲ್ಲ. ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಇಳಿಯಬಾರದು ಎಂದರೆ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಅವರು ಮನವಿ ಮಾಡಿದರು.
ಸರ್ಕಾರ ಲಾಕ್‍ಡೌನ್ ಮಾಡಲಿದೆ ಎಂದು ಎಲ್ಲಿಯೂ ಹೇಳಿಲ್ಲ. ನಮಗೆ ಯಾಕೆ ಲಾಕ್‍ಡೌನ್ ಬೇಕು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮಗೆ ನಾವು ಲಾಕ್ ಮಾಡಿಕೊಂಡರೆ ಯಾವುದೇ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಸಲಹೆ ಮಾಡಿದರು.
ಕೋವಿಡ್ 2ನೇ ಅಲೆ ಅತ್ಯಂತ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದೆ. ನಮ್ಮ ಊಹೆಗೂ ಮೀರಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಬ್ಬಹರಿದಿನ ಎಂದು ಗುಂಪುಗೂಡುವುದು, ಹೆಚ್ಚು ತಿರುಗಾಡುವುದು, ಮಾಸ್ಕ್ ಧರಿಸದಿರುವುದು, ಸ್ಯಾನಿಟೈಸರ್ ಬಳಕೆ ಮಾಡದಿರುವುದು, ಸಾಮಾಜಿಕ ಅಂತರ ಪಾಲಿಸಬೇಕು.
ಯುಗಾದಿ ಹಬ್ಬವನ್ನು ನೀವು ಎಲ್ಲಿ ಇರುತ್ತೀರೋ ಅಲ್ಲಿಯೇ ಆಚರಿಸಿ. ಹಬ್ಬ ಹರಿದಿನ ಎಂದು ತಿರುಗಾಡುವುದರಲ್ಲಿ ಅರ್ಥವಿಲ್ಲ. ಈ ಬಾರಿ ಯುಗಾದಿಯಲ್ಲಿ ಬೇವು-ಕೋವಿಡ್, ಬೆಲ್ಲ -ಲಸಿಕೆ ಎಂದು ಸೂಚ್ಯವಾಗಿ ಹೇಳಿದರು.
ಒಂದು ವರ್ಷದಿಂದ ಸಾರ್ವಜನಿಕರು ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. ಮತ್ತೆ ಅವರಿಗೆ ಕಷ್ಟ ಬರುವುದು ಬೇಡ ಎಂಬುದು ನನ್ನ ವೈಯಕ್ತಿಕ ಕಳಕಳಿ. ಲಾಕ್‍ಡೌನ್ ಹೇರುವುದು ಬೇಡವೆಂದರೆ, ನಾವು ಎಚ್ಚರ ವಹಿಸಬೇಕು. ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಿದರೆ ಲಾಕ್ ಡೌನ್ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.



