ಬೆಂಗಳೂರು: ರೂಪಾಂತರಿ ಕೊರೊನಾ ವೈರಸ್ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿದ್ದು, ಜನರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ನಗರದಲ್ಲಿ ಮೂವರಿಗೆ ಮಾರಕ ವೈರಸ್ ಅಂಟಿರುವುದರಿಂದ ಜನಸಾಮಾನ್ಯರು ಬಹಳ ಎಚ್ಚರಿಕೆ ವಹಿಸಬೇಕಾಗಿದೆ. 35 ಮಂದಿ ವಾಸವಿರುವ ಶ್ರೀ ಸಾಯಿ ಅಪಾರ್ಟ್‌ಮೆಂಟ್‌ನ ಎಲ್ಲರಿಗೂ 28 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ, ಇದರ ಜತೆಗೆ ಅಪಾರ್ಟ್‌ಮೆಂಟ್ ಏರಿಯಾ ಸೀಲ್ಡೌನ್ ಮಾಡಲಾಗಿದೆ.
ಡಿಸೆಂಬರ್ 19ರಂದು ಬ್ರಿಟನ್ನಿಂದ ಬೆಂಗಳೂರಿಗೆ ಬಂದಿದ್ದ ಉತ್ತರಹಳ್ಳಿಯ ವಸಂತಪುರದ ತಾಯಿ-ಮಗುವಿಗೆ ರೂಪಾಂತರಿ ವೈರಸ್ ತಗುಲಿದೆ. ತಾಯಿ-ಮಗು ಶ್ರೀ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಇದೀಗ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಜನರನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡುವ ಪ್ರಯತ್ನ ನಡೆಸಲಾಗಿತ್ತು. ಅಪಾರ್ಟಮೆಂಟ್ ನಿವಾಸಿಗಳು ಸ್ಥಳಾಂತರಕ್ಕೆ ಒಪ್ಪದ ಹಿನ್ನೆಲೆ ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದೆ.
ಸದ್ಯ ಅಪಾರ್ಟ್‌ಮೆಂಟ್‌ನಲ್ಲೇ ಕ್ವಾರಂಟೈನ್‌ಗೆ ಬಿಬಿಎಂಪಿ ನಿರ್ಧಾರ ಮಾಡಿದೆ. ನಿವಾಸಿಗಳಿಂದ ವಿರೋಧ ವ್ಯಕ್ತವಾದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ. ಯಾವುದೇ ಕಾರಣಕ್ಕೂ ಅಪಾರ್ಟ್‌ಮೆಂಟ್ ಬಿಟ್ಟು ಬರುವುದಿಲ್ಲವೆಂದು ನಿವಾಸಿಗಳು ಪಟ್ಟು ಹಿಡಿದಿದ್ದರು.



