ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಪುನಃ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 15ದಿನ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಕಾಲೇಜು ಶಿಕ್ಷಣದ ಸುತ್ತೋಲೆ ವೈರಲ್ ಆಗಿದ್ದು, ಇದು ಸಂಪೂರ್ಣ ಫೇಕ್ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿದ್ದು ಆ ರಾಜ್ಯಗಳ ಕೆಲ ಭಾಗಗಳಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರು, ಬಳ್ಳಾರಿ, ಹೊಸಪೇಟೆಯಲ್ಲಿ ಸೋಂಕು ನಿಧಾನಗತಿಯಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾಲೇಜು ಶಿಕ್ಷಣ ನಿರ್ದೇಶಕರು ಮಾ.15ರಿಂದ 30ರವರೆಗೆ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದ್ದಾರೆ ಎಂಬ ಸುದ್ದಿ ಕೆಲ ಗಂಟೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವಂತ ಸುತ್ತೋಲೆ, ಇಂದಿನ ಸುತ್ತೋಲೆಯಲ್ಲ. ಅದು ಕೊರೋನಾ ವೈರಸ್ ರಾಜ್ಯದಲ್ಲಿ ಉಲ್ಬಣಿಸಿದಾಗ ಹೊರಡಿಸಿದಂತ ಸುತ್ತೋಲೆಯಾಗಿದೆ. ಅಂತಹ ಸುತ್ತೋಲೆಯನ್ನು ಯಾರೋ ಕಿಡಿಗೇಡಿಗಳು ಈಗ ಎಡಿಟ್ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಟ್ಟಿದ್ದಾರೆ. ಈಗ ವೈರಲ್ ಆಗಿದೆ ಅಷ್ಟೇ.



