Connect with us

Dvgsuddi Kannada | online news portal | Kannada news online

ಕೊರೊನಾ ಲಸಿಕೆ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್

ಪ್ರಮುಖ ಸುದ್ದಿ

ಕೊರೊನಾ ಲಸಿಕೆ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್

ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ (69) ಹಾಗೂ ಅವರ ಪತ್ನಿ ಗಾಯತ್ರಮ್ಮ.ಜಿ.ಎಸ್ (66), ಹಿರಿಯ ನಾಗರೀಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಸೇರಿದಂತೆ ಒಟ್ಟು 74 ಜನರು ಲಸಿಕೆ ಪಡೆದುಕೊಂಡರು.

ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಮಡದಿಯೊಂದಿಗೆ ಲಸಿಕೆ ಪಡೆದು ಮಾತನಾಡಿ, ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೋನ ನಿಯಂತ್ರಣಕ್ಕೆ 10 ತಿಂಗಳೊಳಗಾಗಿ ಲಸಿಕೆ ಕಂಡುಹಿಡಿದಿರುವುದು ಅಭಿನಂದನಾರ್ಹ. ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿಸಿದರು.

ಮಾರ್ಚ್ 1 ರಂದು ಲಸಿಕೆ ಪಡೆಯಬೇಕಿತ್ತು. ಕಾರಣಾಂತರಗಳಿಂದ ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇಂದು ಸ್ವ-ಇಚ್ಚೆಯಿಂದ ನನ್ನ ಮಡದಿಯೊಂದಿಗೆ ಬಂದು ಲಸಿಕೆ ಪಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಸುರಕ್ಷಿರಾಗಿದ್ದೇವೆ. ಲಸಿಕೆ ಪಡೆಯುವುದಕ್ಕು ಮುನ್ನ ಇಲ್ಲಿ ಲಸಿಕೆ ಪಡೆದ ಹಿರಿಯರನ್ನು ವಿಚಾರಿಸಿದ್ದು, ಯಾವುದೇ ರೀತಿಯ ಅಡ್ಡಪರಿಣಾಮ ಸಂಭವಿಸಿಲ್ಲ ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಲಸಿಕೆ ಪಡೆಯದ ಎಲ್ಲಾ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ಅನಾರೋಗ್ಯ ಪೀಡಿತರು ಯಾವುದೇ ಭಯವಿಲ್ಲದೇ, ಹಿಂಜರಿಯದೆ ಲಸಿಕೆ ಪಡೆದುಕೊಂಡು ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.

ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕೊರೋನ ವಾರಿಯರ್ಸ್‍ಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಮಾರ್ಚ್ 1 ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಂತಹವರು ತಮ್ಮ ಆಧಾರ ಕಾರ್ಡ್‍ನೊಂದಿಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಶೇಕಡ 80 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ನಂತರ ಮುಂಚೂಣಿ ಕೊರೋನ ವಾರಿಯರ್ಸ್‍ಗಳಲ್ಲಿ ಶೇಕಡ 70 ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇನ್ನೂ ಕಂದಾಯ ಇಲಾಖೆಯಲ್ಲಿ ಶೇಕಡ 55 ರಷ್ಟು ಹಾಗೂ ಇನ್ನಿತರರು ಸೇರಿ ಶೇಕಡ 60 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ಲಸಿಕೆ ಪಡೆಯದವರಿಗೆ ಮಾ.6 ರವರೆಗೆ ಕಾಲವಕಾಶವಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮಾರ್ಚ್ 1 ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಮೊದಲ ದಿನ 11 ಜನ ಲಸಿಕೆ ಪಡೆದಿದ್ದರು. ಆದರೆ ಇಂದು ಸರ್ಕಾರಿ ಹಾಗೂ ಖಾಸಗಿ ಎರಡು ವಲಯಗಳು ಸೇರಿ 63 ಜನರು ಲಸಿಕೆ ಪಡೆದುಕೊಂಡಿದ್ದು, ಒಟ್ಟು 74 ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಅಭಿಯಾನದಲ್ಲಿ ಸಂಸದರ ಪತ್ನಿ ಗಾಯತ್ರಮ್ಮ ಜಿ.ಎಸ್, ಕಾರ್ಪೋರೇಟರ್ ಆರ್.ಎಲ್.ಶಿವಪ್ರಕಾಶ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕ ನೀಲಕಂಠ, ಯುವ ಮುಖಂಡರಾದ ಶಿವಕುಮಾರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top