ಅಹಮದಾಬಾದ್: ಗುಜರಾತಿನಲ್ಲಿ ಬಿಜೆಪಿ ಪಕ್ಷಕ್ಕೆ ಶಾಕ್ ಎದುರಾಗಿದ್ದು, ಬುಡಕಟ್ಟು ಜನರ ಪರ ಧ್ವನಿ ಎತ್ತಿರುವ ಗುಜರಾತ್ ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಮನ್ಸುಖ್ ವಾಸವ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.
ನರ್ಮದಾ ಜಿಲ್ಲೆಯ 121 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಕೋರಿ ವಾಸವ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಭರೂಚ್ ಕ್ಷೇತ್ರದ ಆರು ಬಾರಿಯ ಸಂಸದರಾದ ವಾಸವ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ, ನನ್ನ ತಪ್ಪುಗಳಿಂದಾಗಿ ಪಕ್ಷದ ವರ್ಚಸ್ಸಿಗೆ ಹಾನಿಯಾಗಬಾರದೆಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನನ್ನನು ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.
ಡಿಸೆಂಬರ್ 28 ರಂದು ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ, ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಅವರನ್ನು ಭೇಟಿಯಾದ ನಂತರ ಭರೂಚ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಾಸವ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಮೂಲಕ ರಾಜೀನಾಮೆ ಪತ್ರ ಬಂದಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಭರತ್ ಪಾಂಡ್ಯ ಹೇಳಿದ್ದಾರೆ. ಪಾಟೀಲ್ ಅವರೊಂದಿಗೆ ಮಾತನಡಿದ್ದೇನೆ ಮತ್ತು ಅವರೊಂದಿಗಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ಎಂದು ಭರವಸೆ ನೀಡಿದ್ದಾರೆ. ವಾಸವ ಗುಜರಾತ್‌ನ ಹಿರಿಯ ಸಂಸದರಾಗಿದ್ದು, ಅವರ ಎಲ್ಲಾ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ಎಂದು ಪಾಂಡ್ಯತಿಳಿಸಿದ್ದಾರೆ.