ಚಿತ್ರದುರ್ಗ: ಮುರುಘಾಮಠದಲ್ಲಿ ಫೋಟೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಬಂಧನವಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 6ರಂದು ರಾಜಾಂಗಣದ ಗೋಡೆ ಮೇಲಿದ್ದ 47ಫೋಟೋ ಕಳ್ಳತನ ಆಗಿವೆ ಎಂದು ಮುರುಘಾ ಮಠದ ಆಡಳಿತದ ಉಸ್ತುವಾರಿ ವಹಿಸಿರುವ ವಸ್ತ್ರಮಠದ್ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ.7ರಂದು ಪ್ರಕರಣದ ಇಬ್ಬರು ಆರೋಪಿಗಳಾದ ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ ಹಾಗೂ ಎಸ್ ಜೆ ಎಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಶಿವಾನಂದ ಸ್ವಾಮಿ ಇವರುಗಳನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಕಳ್ಳತನಕ್ಕೆ ಎಸ್.ಕೆ.ಬಸವರಾಜನ್ ಹಾಗೂ ಪತ್ನಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಪ್ರಚೋದನೆಯೇ ಕಾರಣ ಎಂದು ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ತಡರಾತ್ರಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು, ನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು,ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಬಂಧಿಸಲು ಶೋಧ ಕಾರ್ಯ ನಡೆಸಿದ್ದಾರೆ.ಚಿತ್ರದುರ್ಗದ ನಗರ ಪೊಲೀಸ್ ಠಾಣೆಗೆ ಬಸವರಾಜನ್ ಅವರನ್ನು ವಿಚಾರಣೆಗೆ ಕರೆತಂದಿರುವ ಹಿನ್ನೆಲೆಯಲ್ಲಿ ನಗರದಲ್ಲೇಡೆ ಪೊಲೀಸರು ಹೈ ಅಲರ್ಟ್ ಆಗಿದ್ದು, ಓಬವ್ವ ವೃತ್ತ ಸೇರಿ ಹಲವೆಡೆ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.



