ಸಿರಿಗೆರೆ: ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ ಇಂದು ಸಂಜೆ ಭೇಟಿ ನೀಡಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಫಲ ಪುಷ್ಪಹಾರ ಸಮರ್ಪಿಸಿ ಕೃಪಾಶೀರ್ವಾದ ಪಡೆದರು.
ಶ್ರೀಗಳು ಜೆ.ಪಿ. ನಡ್ಡಾ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅವರಿಗೆ ” ಆತ್ಮನಿವೇದನ್” ಹಿಂದಿ ಕೃತಿಯನ್ನು ನೀಡಿ ಗೌರವಿಸಿದರು. ಈ ವೇಳೆ ಶ್ರೀಗಳ ರೈತ ಮುಖಿ, ಸಮಾಜಮುಖಿ, ಶೈಕ್ಷಣಿಕ, ಧಾರ್ಮಿಕ, ಸಮಾಜ ಮುಖಿ ಕಾರ್ಯಗಳನ್ನು ಶ್ಲಾಘಿಸಿದ ನಡ್ಡಾರವರು, ಪೂಜ್ಯರ ಮಾರ್ಗದರ್ಶನ ಕೋರಿದರು.
ಈ ಸಂದರ್ಭದಲ್ಲಿ ದಾವಣಗೆರೆ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ್, ಚನ್ನಗಿರಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಹೊಳಲ್ಕೆರೆ ಶಾಸಕರಾದ ಶ್ರೀ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀ ನವೀನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು, ಹಾಜರಿದ್ದರು.



