ಹೊಳಲ್ಕೆರೆ: ಇಡೀ ಕುಟುಂಬ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ತಂದೆ ಸಾವಿನಿಂದ ತಾಯಿ- ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅದೇ ನೋವಿನಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ.
ಅಮ್ಮ ಮಗಳ ಶವ ಕೊಳೆತು ವಾಸನೆ ಬಂದ ಮೇಲೆ ಪತ್ತೆಯಾಗಿದೆ. ಕುಟುಂಬ ಜವಾವ್ದಾರಿ ಹೊತ್ತಿದ್ದ ಅಪ್ಪನ ಸಾವು, ಅಮ್ಮ ಮಗಳ ಬದುಕನ್ನೇ ಕಸಿದುಕೊಂಡಿದೆ. ಹೊಳಲ್ಕೆರೆಯ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪುಷ್ಪ (52) ತಾಯಿ ಹಾಗೂ ಮಗಳು ಲಾವಣ್ಯ(16) ಸಾವನ್ನಪ್ಪಿರುವ ದುರ್ದೈವಿಗಳು. ಇಬ್ಬರು ಮೃತಪಟ್ಟು ಒಂದು ವಾರ ಆಗಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹ ಕೊಳೆತು ವಾಸನೆ ಬಂದ ಮೇಲೆ ಅಕ್ಕಪಕ್ಕದವರಿಗೆ ಗೊತ್ತಾಗಿದೆ.
ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಹೊಡೆದ ಮೇಲೆ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪುಷ್ಪ ಅವರ ಪತಿ ಬಸವರಾಜಪ್ಪ ಕಳೆದ 3 ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇಡೀ ಮನೆಯ ಜವಾಬ್ದಾರಿಯನ್ನು ಬಸವರಾಜಪ್ಪ ಅವರೇ ನಿಭಾಯಿಸುತ್ತಿದ್ದರಂತೆ. ಬಸವರಾಜಪ್ಪ ಸಾವಿನಿಂದ ಪುಷ್ಟ ಹಾಗೂ ಮಗಳು ಲಾವಣ್ಯ ಇಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ನೋವಿನಲ್ಲಿ ಪ್ರಾಣ ಬಿಟ್ಟಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಪ್ರಕರಣವನ್ನು ಚಿಕ್ಕಜಾಜೂರು ಪೊಲೀಸರು ದಾಖಲಿಸಿಕೊಂಡಿದ್ದಾರೆ.



