ಚಿತ್ರದುರ್ಗ: ವಿದ್ಯಾರ್ಥಿಗಳು ಕೈ ಮಾಡಿದರೂ ಬಸ್ ನಿಲಿಸಿಲ್ಲ. ಈ ವೇಳೆ ಹಿಂಬದಿಯಿಂದ ಬಂದ ಲಾರಿಯೊಂದು ವಿದ್ಯಾರ್ಥಿಗಳ ಮೇಲೆ ಹರಿದಿದೆ. ಇದರ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಗಾಯಗೊಂಡಿದ್ದಾನೆ. ಇದರಿಂದ ಗ್ರಾಮಸ್ಥರು ಚಿತ್ರದುರ್ಗ- ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಸಿರಿಗೆರೆ ಸಮೀಪದ ವಿಜಾಪುರ ಗೊಲ್ಲರಹಟ್ಟಿಯ ರಾಷ್ಟ್ರೀಯ ಹೆದ್ದಾರಿ -48 ಬಳಿ ಈ ಘಟನೆ ನಡೆದಿದೆ. ಲಾರಿ ಡಿಕ್ಕಿ ಹೊಡೆದು ಹಿರೆಕಂದವಾಡಿ ಗ್ರಾಮದ ವಿದ್ಯಾರ್ಥಿನಿ ಸುಚಿತ್ರಾ (18) ಮೃತಪಟ್ಟಿದ್ದಾರೆ. ಐಟಿಐ ಓದುತ್ತಿರುವ ಮತ್ತೊಬ್ಬ ಯುವಕ ಎಂ.ಆದಿತ್ಯ ಅಪಘಾತದಲ್ಲಿ ಗಾಯಗೊಂಡಿದ್ದು, ಚಿತ್ರದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ವಿದ್ಯಾರ್ಥುಗಳು ಚಿತ್ರದುರ್ಗ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಬೆಳಿಗ್ಗೆ ಬಸ್‌ಗಾಗಿ ಕಾಯುತ್ತಿದ್ದಾಗ ರಸ್ತೆಯಲ್ಲಿ ಬಂದ ಬಸ್‌ಗೆ ಕೈ ಮಾಡಿದ್ದಾರೆ. ಅದು ನಿಲ್ಲಿಸದೇ ಹೋಗಿದೆ. ಆಗ ಹಿಂದಿನಿಂದ ಬಂದ ಲಾರಿಯೊಂದು ಯುವತಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ಆರಂಭಿಸಿದರು.ಒಂದು ಗಂಟೆಗೂ ಹೆಚ್ಚು ಕಾಲ ವಾಹನ ತಡೆದು ಪ್ರತಿಭಟನೆ ನಡೆಸಿದರು.ಇದರಿಂದ ಚಿತ್ರದುರ್ಗ ಹಾಗೂ ದಾವಣಗೆರೆ ನಡುವೆ ಸಂಚರದಲ್ಲಿ ವ್ಯತ್ಯಯ ಉಂಟಾಗಿತ್ತು.
ಕೆಎಸ್ ಆರ್ ಟಿಸಿ ಬಸ್ ಗಳು ಸರ್ವಿಸ್ ರಸ್ತೆಗೆ ಬರಲ್ಲ. ಬಹುತೇಕ ಬಸ್‌ಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಿಲ್ಲಿಸುವುದೇ ಇಲ್ಲ. ಶಾಲೆ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಬಸ್‌ಗೆ ಕಾಯುವ ಅನಿವಾರ್ಯತೆ ಇದೆ. ಈ ಕಾರಣಕ್ಕೆ ಹಲವು ಬಾರಿ ಅಪಘಾತಗಳು ಸಂಭವಿಸಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.



